ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುವ ಬಗ್ಗೆ ಪೇಜಾವರ ಸ್ವಾಮಿಗಳ ಆಕ್ಷೇಪಕ್ಕೆ ಪ್ರತಿಕ್ರಿಯೆ (ದಿನಾಂಕ ಜೂನ್ 12, 2011)
[dropcap]ದ[/dropcap]ಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿರುವ ಬಗ್ಗೆ ಉಡುಪಿ ಪೇಜಾವರ ಮಠದ ಶ್ರೀಪಾದರು ಮತ್ತು ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಇವರುಗಳ ಮದ್ಯೆ ಇತ್ತೀಚೆಗೆ ಒಂದು ಸ್ವಾರಸ್ಯಕರ ಚರ್ಚೆ ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಇವರ ವಾದವಿವಾದಗಳು ತೀರಾ ವ್ಯತಿರಿಕ್ತವಾಗಿದ್ದು, ಸ್ವಾಮಿಗಳು ಶತಮಾನಗಳಿಂದ ಚಾತುರ್ವರ್ಣೀಯ ಅಧಾರದ ಮೇಲೆ ನಿಂತಿರುವ ಹಿಂದೂ ಸಮಾಜವನ್ನು ಚಂದಗಾಣಿಸುವ ಮತ್ತು ಅದರಿಂದ ಶತಮಾನಗಳಿಂದ ನೋವುಂಡು ತುಳಿತಕ್ಕೂ, ದಮನಕ್ಕೂ ಒಳಪಟ್ಟು ಸಮಾಜದಿಂದ ಬಹಿಷ್ಕೃತರಾಗಿ ನರಳುತ್ತಿರುವ ದಲಿತರನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತದೆ. ಸ್ವಾಮಿಗಳು ಅಸ್ಪೃಶ್ಯತೆಯನ್ನು ನಿವಾರಿಸುವ ಮಟ್ಟಿಗೆ ಆಸಕ್ತಿ ಹೊಂದಿರಬಹುದು. ಆದರೆ ಅವರ ಪ್ರಯತ್ನಗಳು ಯಾವುದೇ ಫಲ ನೀಡಿಲ್ಲ. ಚಾತುರ್ವರ್ಣೀಯ ಕರ್ಮ ಸಿದ್ದಾಂತವನ್ನು ಪ್ರತಿಪಾದಿಸುವವರು ವೈಷ್ಣವ ದೀಕ್ಷೆ ಕೊಟ್ಟ ಮಾತ್ರಕ್ಕೆ ಯಾವ ಬದಲಾವಣೆಗಳನ್ನು ಮಾಡಿಸಲು ಸಾಧ್ಯ? ಶ್ರೀಗಳು ಈ ಹಿಂದೆ ಮೂರು ಬಾರಿ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಅಧಿಕಾರವನ್ನು ಸ್ವೀಕರಿಸಿದ್ದರೂ ಅವರ ಆ ಕಾಲಾವಧಿಯಲ್ಲಿ ಮಠದಲ್ಲಿ ಯಾವುದೇ ರೀತಿಯ ಸುಧಾರಣೆಯನ್ನಾಗಲಿ, ವರ್ಣ ಬೇಧವನ್ನು ತೊಡೆದು ಹಾಕುವ ಪ್ರಯತ್ನಗಳಾಗಲಿ ನಡೆಸಿರುವುದು ಕಂಡು ಬಂದಿಲ್ಲ. ಅವರ ಸಂಪ್ರದಾಯ ಬದ್ಧತೆ ಅವರಿಗೆ ಅವಕಾಶ ನೀಡಲಿಲ್ಲ ಹಾಗೂ ಸಂಪ್ರದಾಯವನ್ನು ಮುರಿದು ಸುಧಾರಣೆಯನ್ನು ತರುವ ಮನೋಧರ್ಮವನ್ನೂ ಅವರು ಪ್ರದರ್ಶಿಸಲಿಲ್ಲ. ಪುತ್ತಿಗೆ ಮಠದ ಶ್ರೀಪಾದರು ಅಮೆರಿಕಕ್ಕೆ ಹೋಗಿ ತನ್ನ ಭಕ್ತಾದಿಗಳನ್ನು ಕಂಡು ಬಂದರು ಎಂಬ ಒಂದೇ ಕಾರಣದಿಂದ ಅವರು ಪರ್ಯಾಯ ಪೀಠ ಸ್ವೀಕರಿಸುವ ದಿನ ಅವರ ವಿರುದ್ದ ಸತ್ಯಾಗೃಹ ಹೂಡಿದ್ದರು. ತಮ್ಮ ಅಷ್ಠ ಮಠದ ಯತಿಗಳೊಳಗೆಯೇ ಸಮನ್ವಯವನ್ನು ಮೂಡಿಸಲು ಅಸಮರ್ಥರಾದ ಶ್ರೀಗಳು ಅನಾದಿ ಕಾಲದಿಂದಲೂ ಶ್ರೇಣೀಕೃತ ಸಮಾಜದಲ್ಲಿ ದಮನಿತರಿಗಾಗುವ ಶೋಷಣೆಗಳನ್ನೂ ಅನಾಚಾರಗಳನ್ನೂ ತೊಡೆದುಹಾಕುವರೆಂದು ನಂಬಲು ಸಾಧ್ಯವೇ? ಚಾತುರ್ವರ್ಣೀಯವು ಹಿಂದೂ ಧರ್ಮದ ಒಂದು ಅಖಂಡ ಅಂಗವೆಂದು ಶ್ರೀಗಳಂಥವರು ಪ್ರತಿಪಾಧಿಸುವುದು ನಿಜವಲ್ಲವೇನು? ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ರಿಯೆಯಲ್ಲಿ ಕೂಡಾ ಪುರುಷ ಸೂಕ್ತದ ಪಠಣ ಕಡ್ಡಾಯವಲ್ಲವೇನು? ಹಿಂದೂಗಳ ಯಾವುದೇ ಪಂಥದವರು ಸಹಾ ಚಾತುರ್ವಣ್ಯವನ್ನು ತಮ್ಮ ಧರ್ಮದ ಮೂಲಭೂತ ಆಧಾರವಾಗಿ ಪ್ರತಿಪಾದಿಸುವುದಿಲ್ಲವೇನು? ಈ ವೈದಿಕ ಧರ್ಮಗಳಲ್ಲಿರುವ ಅನಾಚಾರಗಳನ್ನು ಸಂಪೂರ್ಣವಾಗಿ ತೊರೆದಿರುವ ಬೌದ್ಧ ಧರ್ಮವನ್ನು ಸ್ವೀಕರಿಸುವವರಿಗೆ ಹಿಂದುತ್ವದ ಕಟ್ಟುಪಾಡುಗಳನ್ನು ಮೀರಿ ನಡೆಯುವ ಸ್ವಾತಂತ್ರ್ಯಲಭಿಸುವುದಿಲ್ಲವೇನು? ಇದಕ್ಕಾಗಿ ಅಲ್ಲವೇ ಬಾಬಾ ಸಾಹೇಬ್ ಅಂಬೆಡ್ಕರ್ರವರು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ ಎಂದು ಸಾರಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು? ಅವರ ಹಾದಿಯನ್ನು ಇತರ ದಲಿತರು ಅನುಸರಿಸಿದರೆ ಏಕೆ ಶ್ರೀಗಳು ಚಿಂತಿತರಾಗಬೇಕು? ಅವರ ಬಿಡುಗಡೆಯ ದಾರಿಯನ್ನು ಅವರೇ ಕಂಡುಕೊಳ್ಳಲಿ.
ಶ್ರೀಗಳು ಇತರ ಧರ್ಮವನ್ನು ಹೆಸರಿಸಿ ಅವರಲ್ಲಿ ದಲೈಲಾಮವಾಗಲಿ, ಪೋಪ್ ಆಗಲು ಸಾಧ್ಯವೇ ಎಂಬ ವಿತಂಡವಾದವನ್ನು ಮುಂದಿರಿಸಿರುವರು. ಬೇರೆ ಯಾವುದೇ ಧರ್ಮದಲ್ಲಿಯೂ ಧರ್ಮದೊಳಗಿನ ಹುಟ್ಟು ಅವನು ಯಾವ ಸ್ಥಾನವನ್ನು ಹೊಂದುವುದಕ್ಕೂ ಅಡ್ಡಿ ಬರುವುದಿಲ್ಲ ಎನ್ನುವುದು ಶ್ರೀಗಳಿಗೆ ತಿಳಿಯದಿರುವುದು ವಿಷಾದನೀಯ. ಹಿಂದೂ ಧರ್ಮದಲ್ಲಿ ಪ್ರತಿಪಾದಿಸಿದಂತೆ ಪುರುಷಸೂಕ್ತನ ಪಾದದಿಂದ ಹುಟ್ಟಿದ ಶೂದ್ರನು ಆತನ ಮುಖ, ಭುಜ, ತೊಡೆಗಳಿಂದ ಜನಿಸಿದವರ ಸೇವೆಯನ್ನು ಸದಾ ಸಲ್ಲಿಸುವ ಕರ್ತವ್ಯವನ್ನು ಹೊತ್ತುಕೊಂಡೇ ಜನಿಸುತ್ತಾನೆ. ಪಾದ ಧೂಳಿಯಿಂದ ಜನಿಸಿದ ಪಂಚಮನು, ಅಂದರೆ ದಲಿತನು, ಸಮಾಜದಿಂದಲೇ ಹೊರಗುಳಿದು ಇತರರೆಲ್ಲರಿಂದ ಬಹಿಷ್ಕೃತನಾಗಿ ತ್ಯಾಜಗಳನ್ನಷ್ಟೇ ಉಂಡು ಬದುಕುವುದಕ್ಕೆ ಮಾತ್ರ ಅರ್ಹನಾಗಿರುತ್ತಾನೆ. ಇದನ್ನು ಒಪ್ಪಿಕೊಂಡು ಅಂತಹ ನಿಕೃಷ್ಟ, ಅಮಾನವೀಯ ಸ್ಥಿತಿಯನ್ನು ಹೊತ್ತುಕೊಂಡೇ ಬಾಳಬೇಕೇನು? ಈ ಪರಿಯ ಅಸಹ್ಯ ಮತ್ತು ಅನಿಷ್ಠತೆಯನ್ನು ಪ್ರತಿಪಾದಿಸುವ ದುರ್ಗುಣಗಳು ಅತ್ಯಂತ ಶ್ರೇಷ್ಠ ಎಂದು ಬೊಗಳೆ ಬಿಡುವ ಹಿಂದೂ ಧರ್ಮದಲ್ಲಿ ಮಾತ್ರ ಅಲ್ಲದೆ ಪ್ರಪಂಚದ ಇತರ ಯಾವುದೇ ಧರ್ಮಗಳಲ್ಲಿ ಶತಮಾನಗಳಿಂದಲೂ ಕಾಣಸಿಗುವುದಿಲ್ಲ ಹಾಗೂ ಅದನ್ನು ಸಮರ್ಥಿಸುವವರು ಶಿಕ್ಷಿಸಲ್ಪಡುವರು. ಆದರೆ ನಮ್ಮಲ್ಲಿ ಅದನ್ನು ಪ್ರತಿಪಾದಿಸುವವರು ಸಂತರೆಣಿಸಿಕೊಳ್ಳುವುದು ನಮ್ಮ ದುರಂತ. ಇಂತಹ ಧರ್ಮಾವಲಂಬಿಯಾಗಿ ಹೆಮ್ಮೆಪಟ್ಟು ತಾನು ಹಿಂದೂ ಎಂದು ಗರ್ವದಿಂದ ಹೇಳಲು ಕರೆ ಕೊಡುವವರನ್ನು ಏನೆನ್ನಬೇಕು? ಕುವೆಂಪುರವರಂಥ ಮಹಾನ್ ಜ್ಞಾನವಂತ ರಾಷ್ಟ್ರಕವಿಯವರು ಪ್ರತಿಪಾದಿಸುವ ವಿಶ್ವ ಮಾನವ ಧರ್ಮವು ಹಿಂದೂ ಧರ್ಮಕ್ಕೆ ಹೊರತಾದುದೇ? ಠಾಗೋರ್ರವರ ಸಮಸ್ತ ಮಾನವ ಕುಲದ ಏಕತೆಯ ಭಾವನೆಯು ಹಿಂದೂ ಧರ್ಮಕ್ಕೆ ವಿರೋಧವಾದುದೇ? ಅವುಗಳನ್ನು ಹಿಂದೂಗಳಿಗೆ ಒಂದು ಆದರ್ಶವೆಂದು ಶ್ರೀಗಳು ಯಾಕೆ ಹೇಳುತ್ತಿಲ್ಲ? ಉದಾತ್ತ ಭಾವನೆಗಳೆಲ್ಲವನ್ನೂ ತಿರಸ್ಕರಿಸಿ ಕೇವಲ ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಕಾರ್ಯ ಸೂಚಿಯಾದ ಅನ್ಯ ಧರ್ಮ ದ್ವೇಷ, ಸ್ವಧರ್ಮ ಶ್ರೇಷ್ಠತೆಯನ್ನು ಏಕೆ ತನ್ನದನ್ನಾಗಿಸಿಕೊಂಡಿದ್ದಾರೆ? ಈ ರೀತಿಯ ಘೋಮುಖ ವ್ಯಾಘ್ರದಂತಹ ಕಪಟ ಮುಖವಾಡವನ್ನು ತೊಟ್ಟುಕೊಂಡು ದಲಿತರನ್ನು ದಾರಿ ತಪ್ಪಿಸುವ ಪ್ರಕ್ರಿಯೆಗಳನ್ನು ತೊರೆದು ತಾನು ಪಡೆದ ದೀಕ್ಷೆಗನುಗುಣವಾಗಿ ಪೂಜೆ ಪುರಸ್ಕಾರಗಳನ್ನು ಕ್ರಮದಂತೆ ಮುಂದುವರಿಸಿಕೊಂಡು ಬಂದರೆ ಶ್ರೇಯಸ್ಕರವೆಂದು ಭಾವಿಸುತ್ತೇವೆ.
ಚಾತುರ್ವರ್ಣೀಯ ಜಾತ್ಯಾಧಾರಿತ ಉಚ್ಛ, ನೀಚ ಜಾತಿಗಳ ಪರಿಗಣನೆ ಇತ್ಯಾದಿಗಳ ವಿರುದ್ಧ ದಮನಕ್ಕೊಳಗಾದವರು ಪ್ರತಿಭಟನೆ ಮಾಡತೊಡಗಿದ್ದಾರೆ. ಸ್ವಾತಂತ್ರ್ಯವನ್ನು ಘೋಷಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪರಿವರ್ತನೆ ಮತ್ತು ಪ್ರತಿಭಟನೆ ಎಲ್ಲೇ ಆರಂಭವಾಗಲಿ, ಯಾರೇ ಪ್ರಾರಂಭಿಸಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಬೌದ್ಧ ಧರ್ಮದ ದೀಕ್ಷೆ ತಳೆಯುವುದು ಅವುಗಳಲ್ಲೊಂದು. ಜಾತ್ಯಾಧಾರಿತ ವರ್ಗೀಕೃತ ಸಮಾಜದ ಸಮರ್ಥಕರ, ದಲಿತರ ದಮನವನ್ನು ನ್ಯಾಯೀಕರಿಸುವ ಸಂತರೆಣಿಸಿಕೊಳ್ಳುವವರ ವಾದಗಳನ್ನು ಸೈದ್ಧಾಂತಿಕವಾಗಿಯೂ, ನಡೆವಳಿಕೆಗಳಲ್ಲೂ ಪ್ರತಿಭಟಿಸುವುದು ಸಮಾಜದ ಒಳಿತನ್ನು ಬಯಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಂತೆಯೇ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಚಳುವಳಿಗೆ ನಮ್ಮ ಶುಭಕಾಮನೆಗಳು.