ಮಾರ್ಚ್ 23, 2010 ರ ವಾರ್ತಾಭಾರತಿಯಲ್ಲಿ ಪ್ರಕಟಿತ ಲೇಖನ)
[dropcap]ನ[/dropcap]ಮ್ಮ ಸಮಾಜದ ಮನೋಸ್ಥಿತಿಯ ಬಗೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಒಂದು ವಿಶ್ಲೇಷಣೆಯನ್ನು ನೀಡಿ ದ್ದಾರೆ; ‘ಹುಚ್ಚ್ಚು ಮನಸ್ಸಿನ ಹತ್ತು ಮುಖಗಳು’ ಎಂದು, ಅದನ್ನೇ ಒಂದು ಸಂಸ್ಕತ ಶ್ಲೋಕದ ಮೂಲಕ ಅವರು ಚಿತ್ರಿಸಿದ್ದಾರೆ. ‘ಮರ್ಕಟಸ್ಯ ಸುರಾಪಾನಂ ಮದ್ಯೇ ವಶ್ಚೀಕ ತಾಡನಂ, ತನ್ಮದ್ಯೆ ಭೂತ ಸಂಚಾರಂ, ಯದ್ವಾ ತದ್ವಾ ಭವಿಷ್ಯತೀ’ ಹೆಂಡ ಕುಡಿದ ಮಂಗನಿಗೆ ಚೇಳು ಕಡಿಯು ತ್ತದೆ. ಭೂತ ಸಂಚಾರ ಆಗುತ್ತದೆ. ಮತ್ತೆ ನಡೆಯುವುದು ಏನೇನೋ ಎಂದು ಅದರ ಅರ್ಥ. ಇದು ನಮ್ಮನ್ನು ಕಳೆದ 6 ದಶಕ ಗಳಿಂದ ಆಳುತ್ತಾ ಬಂದಿರುವವರ ಹುಚ್ಚು ಮನಸ್ಸಿನ 10ಮುಖಗಳುಳ್ಳ ಆಳ್ವಿಕೆಯ ಪರಿಣಾಮ.
ಅದನ್ನೇ ಕುವೆಂಪುರವರು ಇನ್ನೂ ತೀಕ್ಷ್ಣವಾಗಿ ಹೇಳುತ್ತಾರೆ. ‘ಕರಿಯರದೋ ಬಿಳಿಯರದೋ ಯಾರದ್ದಾದರೆ ಏನು? ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ! ವಿಜಯ ನಗರವೋ, ಮೊಗಲರಾಳ್ವಿಕೆಯೋ ಇಂಗ್ಲಿಷರೋ ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ! ಕತ್ತಿ ಪರದೇಶಿ ಯಾದರೆ ಮಾತ್ರ ನೋವೇ? ನಮ್ಮವರೇ ಹದ ಹಾಕಿ ತಿವಿದರದು ಹೂವೇ?’’ ಈ ಕವಿ ಹದಯದ ಮಾತುಗಳು ಸ್ವಲ್ಪ ಹಳೆಯವು. ಆಗ ಆಳುತ್ತಿದ್ದವರು ಬೇರೆ, ಅನಂತರ ಬಂದವರು ಬೇರೆ ಬೇರೆ. ಈಗ ಇರುವವರು ಸಂಪೂರ್ಣ ಬೇರೆ. ಇವರ ಆಡಳಿತದಲ್ಲಂತೂ ಜನ ನುಚ್ಚು ನೂರಾಗುತ್ತಿದ್ದಾರೆ.
‘‘ರವಿ ಕಾಣದುದಂ ಕವಿ ಕಾಣ್ಬಂಗಡ’’ ಎಂದು ನಮ್ಮ ನಂದಳಿಕೆಯವರು ಸುಮ್ಮನೆ ಪ್ರಶ್ನಿಸಿಲ್ಲ. ಅಂದಿನವರ ನಡೆ ನುಡಿ ಗುರು ತಿಸಿ ಇಂದಿನವರು ಎಲ್ಲಿಗೆ ತಲಪುತ್ತಾರೆ ಎನ್ನುವುದು ಕವಿಗಳು ಅಂದೇ ಗುರುತಿಸಿದ್ದರು. ಮುಂದೆ ಆಗುವ ಅನಾಹುತಗಳನ್ನು ನಾವು ಇಂದಿನ ವರು ತಡೆಗಟ್ಟಬೇಕು. ಗತಕಾಲದ ವೈಭವ ಪುರಾಣ ಹಾಗೂ ಶಾಸ್ತ್ರಗಳೆಂದು ಮನುವಿ ನಂಥವರು ಬರೆದಿಟ್ಟದ್ದನ್ನು ಇಂದು ಆಳುವ ವರು ಪುನರಾವರ್ತನೆ ಮಾಡಲು ಹೊರಟಿದ್ದಾರೆ.
ಅದು ದುರಂತಕ್ಕೆ ತಲುಪುವ ಮೊದಲೇ ನಮ್ಮ ಜನ, ನಮ್ಮ ದುಡಿಮೆಗಾರರು, ನಮ್ಮ ಚಿಂತಕರು ಎಚ್ಚರಗೊಂಡು ಅನಾಹುತವನ್ನು ತಪ್ಪಿಸುವುದಕ್ಕೆ ಸನ್ನದ್ಧರಾಗಬೇಕಾಗಿದೆ.66 ನೆಯ ಅ.ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ನಾಡೋಜ ಪ್ರಶಸ್ತಿ ವಿಜೇತೆ ಗೀತಾ ನಾಗಭೂಷಣ್ ಅವರಿಗಿಂತ ಮತ್ತು ಚೆನ್ನಾಗಿ ಪ್ರತಿಭಟನೆಯ ದ್ವನಿಯೊಂದಿಗೆ ನುಡಿದಿರುವ ಮಾತುಗಳಿಗೆ ನಾನೇನು ಹೆಚ್ಚು ಸೇರಿಸಬೇಕಿಲ್ಲ. ಇಂದಿನ ಆಡಳಿತಗಾರರು ಈಗ ಅನುಸರಿಸುತ್ತಿರುವ ದಾರಿಯಲ್ಲೇ ಈ ನಾಡನ್ನು ಆಳುವ ಅವಕಾಶ ಇನ್ನೂ ನೀಡಿದರೆ ನಮ್ಮನ್ನು ನಾವೇ ಎಂದೂ ಹಿಂದಿರುಗಲಾಗದ ದುರಂತಕ್ಕೆ ತಲುಪಿಸಿದಂತಾಗುತ್ತದೆ.
ಸಕಾಲದಲ್ಲಿ ಎಚ್ಚೆತ್ತು ಎಲ್ಲ ಭೇದ ಭಾವಗಳನ್ನು ಬದಿಗಿಟ್ಟು ನಾಡಿನ ಮತ್ತು ಜನರ ರಕ್ಷಣೆಗೆ ಮತ್ತು ಮುನ್ನಡೆಗೆ ಶ್ರಮ ಜೀವಿ ಹಾಗೂ ಬುದ್ಧಿಜೀವಿ ಜನರು ಇಂದು ಸನ್ನಧರಾಗಬೇಕಾಗಿದೆ. ನಮ್ಮ ರಾಜ್ಯವನ್ನು ಆಳಿರುವ 3 ಮುಖ್ಯ ಪಕ್ಷಗಳು ತಮ್ಮಳಗೆ ಜಗಳವಾಡುತ್ತಾ ಒಳ ಗಿಂದೊಳಗೆ ಕೈ ಜೋಡಿಸುತ್ತಾ ಈ ನಾಡನ್ನು ಎಲ್ಲಿಗೆ ತಲುಪಿಸುತ್ತಾರೆ ಎಂಬುವುದನ್ನು ಅಧ್ಯ ಯನ ಮಾಡುವುದಕ್ಕೆ ನಮ್ಮ ವಿ.ವಿ.ನಿಲಯ ಗಳು ಮುಂದಾಗಬೇಕು. ಕೇಂದ್ರ ಸರಕಾರ ಇದೀಗ ಸಂಸತ್ತಿನ ಮುಂದೆ ನಮ್ಮ ದೇಶಕ್ಕೆ ವಿದೇಶಿ ವಿ.ವಿದ್ಯಾಲಯಗಳ ಮುಕ್ತ ಪ್ರವೇಶಕ್ಕೆ ಹಾಗೂ ವ್ಯವಹಾರ ಕುದುರಿಸುವುದಕ್ಕೆ ಅವ ಕಾಶ ನೀಡಲು ಹೊರಟಿದೆ.
ಕರ್ನಾಟಕವಂತೂ ಈ ದಿಸೆಯಲ್ಲಿ ಮತ್ತೆಲ್ಲರಿಗಿಂತ ಮೊದಲು ವಿದೇಶಿಯರೊಂದಿಗೆ ತಾವೂ ಸೇರಿ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರದ ಜಾಗತೀಕರಣಗೊಳಿ ಸಲು ತಯಾರಾಗಿದೆ. ಸ್ವಾತಂತ್ರ ಬಂದಾಗ ರಾಜ್ಯಕ್ಕೊಂದು ವಿ.ವಿ. ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುವುದಕ್ಕಾಗಿ ಸ್ಥಾಪನೆ ಗೊಂಡಿದ್ದವು. ಇಂದು ಒಂದೇ ರಾಜ್ಯದಲ್ಲಿ ಹತ್ತಾರು ವಿ.ವಿ.ಗಳಿವೆ. ಸಾಲದುದಕ್ಕೆ ಡೀಮ್ಡ್ ಯುನಿವರ್ಸಿಟಿಗಳು ಅಂದರೆ ಪರಿಕಲ್ಪಿತ ವಿ.ವಿ.ಗಳಿವೆ. ಕಲಿಸುವ ವಿಷಯಗಳು ಹಾಗೂ ಕಲಿಸುವವರ ಅರ್ಹತೆಗಳು, ವಿದ್ಯಾರ್ಥಿಗಳಿಂದ ವಸೂಲು ಮಾಡಬಹು ದಾದ ಶುಲ್ಕಗಳು ಏನು, ಎಷ್ಟು ಎಂಬುವುದನ್ನು ಆಯಾ ವಿದ್ಯಾಲಯಗಳೆಂದು ಪರಿಗಣಿಸಲಾ ಗುವ ಅಂಗಡಿಗಳೇ ನಿರ್ಣಯಿಸಬಹುದಾಗಿದೆ. ಹೀಗೆ ಸರಕಾರದಿಂದ ಅಧಿಕಾರ ಪಡೆದಿರುವ ಸಂಸ್ಥೆಗಳು ಅಧಿಕಾರ ಪತ್ರವು ಕೈ ತಲಪಿದ ಮರು ಕ್ಷಣದಲ್ಲಿಯೇ ಸರಕಾರದ ಆಜ್ಞೆಗಳನ್ನು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ವರ್ತಿಸಲು ಆರಂಭಿಸಿವೆ ಎನ್ನು ವುದು ಕಳವಳಕ್ಕೆ ಕಾರಣವಾಗಿದೆ. ಜಾತಿ ಗೊಂದು ಮಠ, ಮಠದ ವ್ಯಾಪ್ತಿಯಲ್ಲಿ ಊರಿ ಗೊಂದು ಸಂಸ್ಥಾನ, ಸಂಸ್ಥಾನಗಳೊಳಗಡೆ ಯೋಗವೋ, ಭೋಗವೋ, ರಾಸಕ್ರೀಡೆಯೋ, ಯಮುನಾ ತೀರದಲ್ಲಿ ನಡೆದಂಥಹ ಮಹಿಳಾ ಮಣಿಗಳ ವಸ್ತ್ರಾಪಹರಣವೋ ಏನು ಬೇಕಾ ದರೂ ನಡೆಯಬಹುದು ಎಂಬ ಧರ್ಮ ಇಂದು ಸಾರ್ವಜನಿಕ ಜೀವನವನ್ನು ಕಲುಷಿತ ಗೊಳಿಸುತ್ತಿದೆ.
ಅದೇ ಸಮಯದಲ್ಲಿ ಸರಕಾರದ ಅನುಮತಿ ಇದ್ದೇ ನಡೆಯುವ ಸಾರ್ವಜನಿಕ ನರ್ತನಗ್ರಹಗಳಲ್ಲಿಯೋ ಪಾನಮಂದಿರಗಳ ಲ್ಲಿಯೋ, ಭೋಜನ ಶಾಲೆಗಳಲ್ಲಿಯೋ ಯಾವುದನ್ನು ತಿನ್ನಬೇಕು, ಯಾವುದನ್ನು ಕುಡಿಯಬೇಕು ಯಾವ ರೀತಿ ಕುಣಿಯಬೇಕು ಎಂಬಿತ್ಯಾದಿಗಳನ್ನೆಲ್ಲ ಧರ್ಮ ಒಂದರ ಹೆಸರಲ್ಲಿ ಧರ್ಮ ಸಂರಕ್ಷಕ ಪರಿವಾರದವರು ದೊಣ್ಣೆ ಹಿಡಿದಾ ದರೂ ಆಚರಣೆಗೆ ತರಿಸುವ ಆಡಳಿತ ಇಂದು ನಡೆಯುತ್ತಿದೆ. ಇದಕ್ಕೆ ಕೊನೆ ಎಲ್ಲಿಯೊ ತಿಳಿ ಯದು. 2010-11ರ ಮುಂಗಡ ಪತ್ರ ಸಲ್ಲಿಸುವುದಕ್ಕಿಂತ ಮೊದಲೇ ಹೆಚ್ಚು ಕಡಿಮೆ ರೂ. 500 ಕೋಟಿಗಿಂತಲೂ ಹೆಚ್ಚು ತಮ್ಮವರೆಂದು ತೋರುವವರಿ ಗೆಲ್ಲ ಖಜಾನೆಯಿಂದ ವಿತರಿಸಿದ ವಿತ್ತ ಸಚಿವರೂ ಆಗಿರುವ ಮುಖ್ಯ ಮಂತ್ರಿಗಳು ಅದಕ್ಕೆ ಲೇಖಾನುದಾನದ ಮೂಲಕ ಒಪ್ಪಿಗೆ ಪಡೆದುದಲ್ಲದೆ ಮುಂದಿನ ವರ್ಷದಲ್ಲಿ ಮುಂಗಡವಾಗಿಯೇ ಕೋರಿರುವಂಥಾಹ ಸಾರ್ವಜನಿಕ ವಿತ್ತದ ದುರ್ವಿನಿಯೋಗದ ಪರಮಾವಧಿಯು ವಿಧಾನ ಸೌಧದಲ್ಲಿ ಪ್ರಕಟವಾಗಿದೆ.
ಮುಂದಿನ ಸಾಲಿನಲ್ಲಿ ಅದೆಷ್ಟು ಯಜ್ಞಗಳು, ಯಾಗಗಳು, ಜಾತ್ರೆಗಳು, ಸಂತೆಗಳು, ಶತಮಾನಗಳ ಹಿಂದೆ ಅರಸರಾಗಿದ್ದವರ ಪಟ್ಟಾಭಿಷೇಕಗಳ ವೈಭವದ ಪುನರುಜ್ಜೀವನಗಳು ನಡೆಯಲಿದೆಯೋ ಕಾದು ನೋಡಬೇಕಿದೆ. ಅವೆಲ್ಲವೂ ಈ ದೇಶದ ಅಭಿವದ್ಧ್ದಿಯ ಸಂಕೇತವೆಂಬ ವಾದವನ್ನಂತೂ ಆಳುವವರು ಶಾಸನ ಸಭೆಗಳಲ್ಲಿ ಮಂಡಿಸಿದ್ದಾಗಿದೆ. ಧ್ವನಿ ಮತದ ಮೂಲಕವೋ, ಮೌನವಾಗಿಯೋ, ಆಪರೇಶನ್ ಕಮಲದ ಪ್ರಯೋಗದಿಂದಲೋ ಅಂಗೀಕಾರ ಪಡೆಯುವ ಪ್ರಯತ್ನ ವಂತೂ ನಡೆದೇ ಇದೆ. ಇದೆಲ್ಲ ಯಾರ ತಪ್ತಿಗಾಗಿ, ಯಾರ ಪೋಷಣೆಗಾಗಿ ಎನ್ನುವ ಪ್ರಶ್ನೆ ಮಾತ್ರ ನಮ್ಮನ್ನು ಕಾಡುತ್ತದೆ.
ನಮ್ಮ ದೇಶದ ಪೂರ್ತಿಯಾಗಿ ಪೆಟ್ರೋಲ್, ಡೀಸೆಲ್, ಮತ್ತಿತರ ರಾಸಾ ಯನಿಕ ಉತ್ಪನ್ನಗಳ ಬೆಲೆ ಏರಿಕೆಯಿಂದ ಎಲ್ಲಾ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಚಾಲನೆ ನೀಡಲಾಗಿದೆ. ಸರಕಾರಿ ಮತ್ತು ಖಾಸಗಿ ಸಾರಿಗೆಯ ವೆಚ್ಚ ತೀವ್ರವಾಗಿ ಏರಿಕೆಯಾಗಿದೆ. ರೈತರಿಗೆ ಸಹಾಯವಾಗುವ ಮುಸುಕಿನೊಳಗೆ ಹಾಲಿನ ಬೆಲೆ ಏರಿಸಿರುವುದು ಮಕ್ಕಳಿಗೂ, ವದ್ಧರಿಗೂ ಮಾರಕವಾಗುವಂಥ ಪರಿಣಾಮವನ್ನು ಉಂಟುಮಾಡುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರವೇಶ ದೊರಕಬೇಕಾದರೆ ಶುಲ್ಕ ತೆರಬೇಕೆಂಬ ನಿಯಮದ ಜೊತೆಗೆ ಔಷಧಿಗಳನ್ನೂ ಹಾಗೂ ಇತರ ಆವಶ್ಯಕ ವಸ್ತುಗಳನ್ನು ಪಡೆದು ಕೊಳ್ಳುವುದಕ್ಕೆ ಬೆಲೆ ತೆರಬೇಕಾದಂಥ ಕ್ರಮ ಜಾರಿಗೆ ಬಂದಿದೆ. ಉತ್ಸವಗಳಿಗೆ ಸರಕಾರದ ಬೊಕ್ಕಸದಿಂದ ಹಣ ನೀಡು ವುದಕ್ಕೆ ಬದಲಾಗಿ ಆ ಹಣವನ್ನು ಮಕ್ಕಳಿಗೂ ರೋಗಿಗಳಿಗೂ ಔಷಧೋಪಚಾರಕ್ಕೆ ಮತ್ತು ಚಿಕಿತ್ಸೆಗೆ ನೀಡಿದರೆ ಮುಂದಿನ ಚುನಾವಣೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂಬ ತರ್ಕ ಇಂದಿನ ಸರಕಾರದ್ದಾಗಿದ್ದಂತಿದೆ. ಕೇಂದ್ರ ಸರಕಾರಕ್ಕೆ ಮೊರೆ ಇಡೋಣ ಎಂದರೆ ಅಲ್ಲಿಯೂ ಪಕ್ಷ ಬೇರೆಯಾದರೂ ಆರ್ಥಿಕ ನೀತಿ, ಆಡಳಿತ ರೀತಿ ಇಲ್ಲಿಯವರಂಥದ್ದೇ ಆಗಿರುತ್ತದೆ ಎಂದು ಹೇಳಬೇಕಾಗುತ್ತದೆ.
ಮುಂಗಡ ಪತ್ರದಲ್ಲಿ ಬೆಲೆ ಏರಿಕೆ ತಡೆ ಗಟ್ಟುವ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಭಾಷಣ ಮಾತ್ರ ಬಿಗಿಯುವ ಹಳೆಯ ಜಾಡನ್ನು ಮುಂದುವರಿಸಿದೆ. ದುಬಾರಿ ಬೆಲೆ ತೆತ್ತು ಆಹಾರ ವಸ್ತುಗಳನ್ನು ವಿದೇಶಗಳಿಂದ ಆಮದುಮಾಡಿಕೊಳ್ಳುವ ದು:ಸ್ಥಿತಿಗೆ ನಮ್ಮ ದೇಶವನ್ನು ನಮ್ಮನ್ನು ಆಳುವವರು ತಂದು ನಿಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದ ಈ ನಾಡು ಇಂದು ಕೄಷಿ ಉತ್ಪಾದನೆಯೇ ಅಸಾಧ್ಯ ಎಂಬ ನೆಲೆಗೆ ಬಂದು ನಿಂತಿದೆ. ರಸಗೊಬ್ಬರಗಳು, ರಾಸಾಯನಿಕ ವಸ್ತುಗಳ ಬಳಕೆ ಮಿತಿ ಮೀರಬಾರದು ನಿಜ. ಆದರೆ ಸಂಪೂರ್ಣ ನಿಷೆೇಧಗೊಂಡರೆ ಕೄಷಿಕನ ಭೂಮಿಯಲ್ಲಿ ಬೆಳೆ ಬರುವುದಾದರೂ ಹೇಗೆ? ಕರ್ನಾಟಕದ ಕೆಲವು ಕಡೆಗಳಲ್ಲಿ ರಸಗೊಬ್ಬರಕ್ಕೋಸ್ಕರ ಚಳವಳಿ ನಡೆಸಿದ ರೈತರಿಗೆ ಬಂದೂಕಿನ ಗುಂಡು ಉಡುಗೊರೆ ಸಿಕ್ಕಿದ್ದು ನೆನಪಿದೆಯಷ್ಟೇ! ಸಾವಯವ ಗೊಬ್ಬರದ ಬಗ್ಗೆ ಮಾತನಾಡುವ ಕಷಿ ಅಧಿಕಾರಿಗಳಿಗೆ ಅದಕ್ಕೆ ಬೇಕಾದಂಥ ಪರಿಸರವನ್ನು ಈ ಹಿಂದೆ ಸಂಪೂರ್ಣ ಹಾಳುಗೆಡವಲಾಗಿದೆ ಎಂಬ ವಿಷಯ ಗೊತ್ತಿಲ್ಲವೇನು?ಜಾನುವಾರು ಸಾಕಲು ಸಾಧ್ಯವೇ ಇಲ್ಲದ ರೈತ ಉಳುಮೆ ಮಾಡಲಾಗದೆ ಕಂಗಾಲಾಗಿದ್ದಾನೆ. ಹಸಿರು ಗೊಬ್ಬರಕ್ಕೆ ಬೇಕಾದ ಸೊಪ್ಪು ಸೊದೆಗಳು ಬೆಳೆಯುವಂಥ ಬೆಟ್ಟ ಗುಡ್ಡಗಳು ಇಂದು ಬೋಳು ಗುಡ್ಡೆಗಳಾಗಿವೆ. ಕೃಷಿ ಭೂಮಿಯು ಕೃಷಿಯೇತರ ಉದ್ದೇಶಗಳಿಗೆಂದು ತುಂಡು ತುಂಡಾಗಿ ಮಾರಾಟವಾಗಿ ಹೋಗಿದೆ.
ದ.ಕನ್ನಡದ ಮತ್ತು ಮಲೆನಾಡಿನ ನದಿಗಳು ಹರಿಯುವ ಖಣಿವೆಗಳಂತೂ ಬರಡು ಭೂಮಿಯಾಗುವಂತೆ ನದಿಗಳನ್ನು ತಮ್ಮ ಜಮೀನುಗಳಿಗೆ ಹರಿಸುವ ಹುನ್ನಾರವನ್ನು ಇಂದಿನ ಆಳುವವರು ಬಹುಮಟ್ಟಿಗೆ ಗುಟ್ಟಿನಲ್ಲಿ ಜರಗಿಸುತ್ತಿದ್ದಾರೆ. ಹೀಗಿರುವಾಗ ಸಾವಯವ ಕೃಷಿಯ ಮಾತು ಬರೇ ಮೊಣ ಕೈಗೆ ಬೆಲ್ಲ ಸವರುವ ಹುನ್ನಾರವಲ್ಲದೆ ಮತ್ತೇನು? ಸರಕಾರದ ರೀತಿ ನೀತಿಗಳು ಬದಲಾಗಬೇಕು, ಜನರ ಆರ್ಥಿಕ ಸುಧಾರಣೆಯೊಂದಿಗೆ ಹಾಗೂ ಬದುಕು ಆರೋಗ್ಯ, ಶಿಕ್ಷಣ, ಸಮನ್ವಯತೆಗಳ ಬೆಳವಣಿಗೆಯೊಂದಿಗೆ ಸ್ವಾವಲಂಬನೆ ಮತ್ತು ಆಂತರಿಕ ಸಂಪನ್ಮೂಲಗಳ ಸದ್ಬಳಕೆ ಮುಖ್ಯವಾಗಿರುವಂಥ ಅಭಿವದ್ಧಿ, ಮಾರ್ಗಗಳ ಯೋಜನೆಗಳನ್ನು ಸರಕಾರಗಳು ಮುಂದಿಟ್ಟು ಅನುಮತಿ ಪಡೆಯಬೇಕು. ಅದರಂತೆ ಸಾರ್ವಜನಿಕರ ಕೂಡುವಿಕೆಯಿಂದ ಅವುಗಳನ್ನು ನೆರವೇರಿಸಬೇಕು. ಪಂಚಾಯತ್ ಮಟ್ಟದಿಂದ ಸಂಸತ್ತಿನ ಮಟ್ಟದವರೆಗೆ. ಈ ದೃಷ್ಟಿಕೋನದಿಂದ ಅಧಿಕಾರದಲ್ಲಿರುವವರು ವರ್ತಿಸಿದಾಗ ದೇಶವು ಮುನ್ನಡೆಯುತ್ತದೆ.
ಅಲ್ಲವಾದರೆ ಕೋಮು, ಜಾತಿ, ಲಿಂಗ, ಪ್ರಾದೇಶಿಕತೆ, ಭಾಷೆ, ಯಾವು ಯಾವುದೋ ಕಾರಣಗಳನ್ನು ಮುಂದೊಡ್ಡಿ ಜನರನ್ನು ಛಿದ್ರಗೊಳಿಸಿ ಉಳ್ಳವರು ಅಧಿಕಾರಸ್ಥರು ಈ ನಾಡಿನ ಭವಿಷ್ಯತ್ತನ್ನು ಹಿಂದಿರುಗಿಸಲಾರದಂತಹ ಅಧೋಗತಿಗೆ ತಲಪಿಸುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಕಾಲ ಮೀರುವ ಮೊದಲೇ ಎಚ್ಚರವಾಗೋಣ, ಒಂದಾಗೋಣ, ವಿಚಾರ ಮಾಡೋಣ, ಕಾರ್ಯಪ್ರವತ್ತರಾಗೋಣ. ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯತ್ತು ನಮ್ಮ ಕೈಯಲ್ಲೇ ಇದೆ. ನಮ್ಮ ಭೂಮಿ, ನಮ್ಮ ಖನಿಜಗಳು, ನಮ್ಮ ನೆಲ, ಜಲ, ಸಂಪತ್ತುಗಳನ್ನೆಲ್ಲ ತಮ್ಮ ಲಾಭಕ್ಕ್ಕಾಗಿ ಕೊಳ್ಳೆ ಹೊಡೆಯುವವರ ಅಧಿಕಾರ ಯಾವರಾಜ್ಯದಲ್ಲೇ ಆಗಲಿ, ಕೇಂದ್ರದಲ್ಲೇ ಆಗಲಿ ಕೊನೆಗಾಣಬೇಕೆಂಬ ಗುರಿಯಿಟ್ಟುಕೊಂಡು ಹೋರಾಟಕ್ಕೆ ಸನ್ನದ್ಧರಾಗುವುದು ಇಂದಿನ ಯುವಜನರ, ಶ್ರಮಜೀವಿಗಳ ಮತ್ತು ಬುದ್ಧಿಜೀವಿಗಳ ಕರ್ತವ್ಯವಾಗಿದೆ. ಇದು ನಮ್ಮ ಕನ್ನಡ ಜನರ ಪರಂಪರೆ. ಕುವೆಂಪುರವರನ್ನು ಅನುಸರಿಸಿ ಹೇಳುವುದಾರೆ ನೂರು ಶಾಸ್ತ್ರಗಳನ್ನು, ಮನುಧರ್ಮ ಶಾಸ್ತ್ರವನ್ನು, ಕೌಟಿಲ್ಯನ ಅರ್ಥಶಾಸ್ತ್ರವನ್ನು, ಕಷ್ಣದೇವರಾಯನ ಆಡಳಿತ ವೈಖರಿಯನ್ನೂ ಬದಿಗಿಟ್ಟು ಭಾರತದ ಏಕತೆ, ರಾಜ್ಯದ ಜನರ ಐಕ್ಯತೆ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಇವುಗಳಿಗೆ ಗುರಿ ಇಟ್ಟು ಆಡಳಿತ ನಡೆಯುವಂತಾಗಲು ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣ.