(ಬರೆದದ್ದು: ಮಾರ್ಚ್ 16, 2010) ವಾರ್ತಾಭಾರತಿಯಿಂದ
[dropcap]ಇ[/dropcap]ಡೀ ರಾಜ್ಯದ ಪ್ರಾಜ್ಞರನ್ನು ಮತ್ತು ಸಾಮಾನ್ಯ ಜನರನ್ನು ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗೆ ಪ್ರಚೋದಿಸಿದ್ದ ಹಂಪಿ ವಿವಿಯ ಭೂಮಿ ಪರ ಭಾರೆಯ ಪ್ರಶ್ನೆಯನ್ನು ಕೈ ಬಿಡಲಾಗಿದೆ ಎಂದು ಮುಖ್ಯ ಮಂತ್ರಿಗಳು ಘೋಷಿಸಿರುವುದು ಸಮಾಧಾನ ತಂದಿದೆ. ಆದರೆ ಇದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಕಾರ್ಯತಃ ವಿಜಯನಗರ ಸಾಮ್ರಾಜ್ಯ ಪುನಶ್ಚೇತನ ಪ್ರತಿಷ್ಠಾನದ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಗಣಿ ಭೂಮಿ ಕಬಳಿಕೆದಾರರು ಸರಕಾರದ ರಕ್ಷಣೆಯಲ್ಲಿ ಅಮೂಲ್ಯ ನೈಸರ್ಗಿಕ ಸಂಪತ್ತನ್ನು, ಅರಣ್ಯ ಭೂಮಿ ಮತ್ತು ಕಷಿ ಭೂಮಿ ಇತ್ಯಾದಿಗಳನ್ನು ಕಬಳಿಸದಂತೆ ಪಾರದರ್ಶಕ ಕ್ರಮಗಳನ್ನು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಘೋಷಿಸಬೇಕು. ಜನರಿಗೆ ಕನ್ನಡ ಭಾಷೆ, ಸಂಸ್ಕೃತಿ, ನಾಡುಗಳ ಅಭಿವದ್ಧಿ ಆಗಬೇಕೆಂಬ ಆಸಕ್ತಿ ಇದೆ.
ಆ ಕಾರ್ಯವನ್ನು ಆರಂಭದಿಂದ ಈ ವರೆಗೆ ನಡೆಸುತ್ತಾ ಬಂದಿರುವ ಹಂಪಿ ವಿವಿಗೆ ಹೆಚ್ಚಿನ ಭೂಮಿ ಅನುದಾನಗಳು ಹಾಗೂ ಅಭಿವದ್ಧಿ ಕಾರ್ಯ ಗಳಿಗೆ ನೆರವು ಮೊದಲಾದವುಗಳನ್ನು ನೀಡುವುದಲ್ಲದೆ ಆ ವಿವಿಯು ಒಂದು ಸ್ವಾಯತ್ತೆ ಸಂಸ್ಥೆಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಪ್ರಮಾಣಿಕವಾಗಿದ್ದರೆ ಅವರು ಬಳ್ಳಾರಿಯ ಗಣಿಗಾರಿಕೆಗೆ ಸಂಬಂಧಿಸಿದ ಭೂ ಹಗರಣಗಳ ಬಗ್ಗೆ ಜಸ್ಟೀಟ್ ಯುಎಲ್ ಭಟ್ ಅವರ ತನಿಖಾ ಆಯೋಗವು ನಡೆಸುತ್ತಿದ್ದ ವಿಚಾರಣೆಯನ್ನು ನಿಲ್ಲಿಸಿ ಅದನ್ನು ಕರ್ನಾಟಕ ಲೋಕಾಯುಕ್ತಕ್ಕೆ ಒಪ್ಪಿಸಲಾಗಿದೆಯಷ್ಟೆ. ಲೋಕಾಯುಕ್ತವು ಈಗಾಗಲೇ ತನಿಖೆ ಮುಗಿಸಿ ಸರಕಾರಕ್ಕೆ ನೀಡಿರಬಹುದಾದ ವರದಿಯನ್ನು ಸರಕಾರವು ತಡಮಾಡದೆ ಸ್ವೀಕರಿಸಿ ಅದರನ್ವಯ ಎಲ್ಲ ಅಪರಾಧಿಗಳ ಮೇಲೆ ಕ್ರಮ ಜರುಗಿಸಬೇಕು. ಅವರ ಇತ್ತೀಚೆಗಿನ ಕಾರ್ಯ ಕಲಾಪಗಳನ್ನು ಮತ್ತು ನಡೆ ನುಡಿಗಳನ್ನು ವೀಕ್ಷಿಸಿದಾಗ ಅವರು ಬಳ್ಳಾರಿ ಮೂಲದ ಭೂ ಕಬಳಿಕೆದಾರರ ಮತ್ತು ಗಣಿ ಕಬಳಿಕೆ ದಾರರ ಅಂಕಿತ ಮೀರಿ ವರ್ತಿಸುವ ಶಕ್ತಿ ಧೈರ್ಯವನ್ನು ಹೊಂದಿಲ್ಲ ಎಂದು ಕಂಡು ಬರುತ್ತದೆ. ಮುಖ್ಯ ಮಂತ್ರಿಗಳಾಗಿ ಅಂಥಹ ದುಷ್ಟಶಕ್ತಿಯನ್ನು ಹದ್ದುಬಸ್ತಿಗೆ ತರುವ ಧೈರ್ಯವನ್ನು ತಳೆದು ತನಗಿರುವ ಅಧಿಕಾರವನ್ನು ಪ್ರಯೋಗಿಸಬೇಕೆಂದು ಸಾರ್ವಜನಿಕರು ಅಪೇಕ್ಷಿಸುತ್ತಾರೆ.
ಕರ್ನಾಟಕದ ಜನ ನಾಡಿನ ನೆಲ, ಜಲ, ಅರಣ್ಯ ನೈಸರ್ಗಿಕ ಸಂಪತ್ತುಗಳನ್ನು ಕಾಪಾಡುವುದಕ್ಕೆ ಮತ್ತು ಅಭಿವದ್ಧಿ ಪಡಿಸುವುದಕ್ಕೆ ಸುಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕೆಂದು ಕನ್ನಡದ ಜನತೆಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅದೊಂದೇ ಇಂದಿನ ಸಮಸ್ಯೆಗಿರುವ ಪರಿಹಾರ.