ಭಗವದ್ಗೀತೆಯ ಬಗ್ಗೆ ಎದ್ದಿರುವ ವಿವಾದದ ಕುರಿತು 2 ಮಾತುಗಳು: (ಬರೆದದ್ದು: ದಿಸೆಂಬರ್ 27, 2011)
[dropcap]ರ[/dropcap]ಷ್ಯದಲ್ಲಿ ಭಗವದ್ಗೀತೆ ರಷ್ಯನ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಗೊಂಡಿದ್ದು, ಅದರಲ್ಲಿ ಹೇಳಲ್ಪಟ್ಟ ಕೆಲವು ಅಪ್ರಿಯ ಬೋಧನೆ, ಹಿಂಸೆ ಮತ್ತು ಜಾತೀಯತೆಯ ಪ್ರತಿಪಾದನೆ ಇತ್ಯಾದಿಗಳಿಗಾಗಿ ಅದನ್ನು ನಿಷೇಧಿಸಲು ಅಲ್ಲಿನ ನ್ಯಾಯಾಲಯದಲ್ಲಿ ಕೆಲವು ನಾಗರಿಕರು ದಾವೆಯನ್ನು ಹೂಡಿದ್ದಾರೆ. ನ್ಯಾಯಾಲಯದ ತೀರ್ಮಾನವನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಲವು ಬಲ ಪಂಥೀಯ ಮತ್ತು ಧರ್ಮಾಂಧ ಸಂಸದರು ಸಂಸತ್ತಿನಲ್ಲಿ ಒಂದು ಸುಳಿಗಾಳಿಯನ್ನೇ ಎಬ್ಬಿಸಿದ್ದಾರೆ. ಪ್ರಾಮುಖ್ಯವಾದ ಲೋಕಪಾಲ ಮಸೂದೆ, ಆಹಾರ ಭದ್ರತಾ ಮಸೂದೆ ಮತ್ತಿತರ ಪ್ರಸ್ತುತ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಮುಖ ವಿಧೇಯಕಗಳು ಚರ್ಚೆಗೆ ಬರುತ್ತಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಿದೆಂದು ತಿಳಿಯಬೇಕಾಗಿದೆ. ಎದುರಾಳಿಗಳನ್ನು ದಮನಿಸಲು ತಮ್ಮ ಬತ್ತಳಿಕೆಯಲ್ಲಿರುವ ಆಯುಧಗಳು ಬರಿದಾದಾಗ ಪ್ರತಿಗಾಮಿ ಶಕ್ತಿಗಳು ತಮ್ಮ ಕೊನೆಯ ಅಸ್ತ್ರವನ್ನಾಗಿ ಭಗವದ್ಗೀತೆಯನ್ನು ಉಪಯೋಗಿಸಿ ದಾರಿ ತಪ್ಪಿಸುವುದು ಸಾಮಾನ್ಯವಾಗಿದೆ. ಅದೇ ತಂತ್ರವನ್ನು ಈಗಲೂ ಉಪಯೋಗಿಸಿದಂತಿದೆ. ರಷ್ಯಾದ ಹಿಂದುಳಿದ ಸೈಬೀರಿಯ ಪ್ರದೇಶದ ಒಂದು ಸಣ್ಣ ಊರಲ್ಲಿ ಇಸ್ಕಾನ್ ಎಂಬ ಸಂಸ್ಥೆಯೊಂದು ನಡೆಸುತ್ತಿರುವ ಕಾರ್ಯಾಚರಣೆಯ ಅಂಗವಾಗಿ ಅಲ್ಲಿನ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಚರ್ಚೆಯಲ್ಲಿ ನಮ್ಮ ಸರಕಾರ ಮತ್ತು ಸಂಸತ್ತು ಮುಳುಗಬೇಕೇ? ಅಲ್ಲಿಯ ಜನರು ಮತ್ತು ನ್ಯಾಯಾಲಯಗಳು ನಮ್ಮ ಗ್ರಂಥಗಳಿಗೆ ನಿಷ್ಠರಾಗಿರಬೇಕೆಂದು ನಾವು ನಿರೀಕ್ಷಿಸಬಹುದೇ?
ಇಷ್ಟಕ್ಕೂ ಭಗವದ್ಗೀತೆಯಲ್ಲಿ ಭೋಧಿಸಲ್ಪಟ್ಟ ಕೆಲವು ಬೋಧನೆಗಳನ್ನು ಗಮನಿಸಿದರೆ ಅದು ಎಷ್ಟು ಹಿಂಸಾತ್ಮಕ, ಅಮಾನವೀಯ ಮತ್ತು ಪ್ರಸ್ತುತ ಜನಜೀವನಕ್ಕೆ ಮಾರಕವೆಂದು ಮನಗಾಣಬಹುದು. ಅರ್ಜುನನು ಯುದ್ಧದಿಂದ ವಿಮುಖನಾದಾಗ ಶ್ರೀಕೃಷ್ಣನು ಅವನನ್ನು ಯುದ್ಧಕ್ಕೆ ಪ್ರಚೋದಿಸುತ್ತಾ “ಯುದ್ಧವನ್ನು ನೀನು ಮಾಡದೇ ಹೋದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀಯಾ; ಚಾತುರ್ವಣ್ಯವೆಂಬ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳನ್ನು ಸೃಷ್ಟಿಸಿದವನು ನಾನು; ಯಾವಾಗಲೆಲ್ಲಾ (ಚಾತುರ್ವಣ್ಯ) ಧರ್ಮಕ್ಕೆ ಹಾನಿಯುಂಟಾಗುವುದೋ ಅವಾಗಲೆಲ್ಲಾ, ದುಷ್ಕರ್ಮಿಗಳನ್ನು ನಾಶಗೊಳಿಸಲು ಮತ್ತು ಚಾತುರ್ವಣ್ಯ ಧರ್ಮವನ್ನು ರಕ್ಷಿಸಲು ನಾನು ಕಾಲಕಾಲಕ್ಕೆ ಹುಟ್ಟಿಬರುತ್ತೇನೆ” ಎಂದ ಉಕ್ತಿಗಳು ಜಾತ್ಯಾತೀತ, ಧರ್ಮ ನಿರಪೇಕ್ಷಿತ, ವರ್ಗರಹಿತ ಸಮಾಜ ನಿರ್ಮಾಣದ ನಮ್ಮ ಸಂವಿಧಾನದ ಮೂಲ ಆಶಯಕ್ಕೇ ತದ್ವಿರುದ್ಧವಾಗಿದೆ. ಚಾತುರ್ವಣ್ಯವನ್ನು ವಿರೋಧಿಸುವ ಅಹಿಂದುಗಳನ್ನು ದುಷ್ಕರ್ಮಿಗಳೆಂದೂ ಮತ್ತು ಅವರನ್ನು ನಾಶ ಮಾಡಲು ಶ್ರೀಕೃಷ್ಣನು ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ಎಂದು ಅರ್ಥೈಸಬೇಕಲ್ಲವೇ? ಹಾಗಿರುವಾಗ ಬೇರಾವುದೋ ದೇಶದಲ್ಲಿ ಅಲ್ಲಿಯ ಸಂವಿಧಾನಕ್ಕೆ ಅನುಗುಣವಾಗಿ ಹಿಂಸೆ, ಅನೀತಿ, ಅಮಾನವೀಯತೆಯನ್ನು ವೈಭವೀಕರಿಸುತ್ತಿರುವ ಭಗವದ್ಗೀತೆಯನ್ನು ಅಲ್ಲಿಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದುದ್ದನ್ನು ನಾವಿಲ್ಲಿ ಪ್ರತಿಭಟಿಸುವುದು ಸಮಂಜಸವೇ? ನಮ್ಮಲ್ಲಾದರೂ ಇಷ್ಟ ಇದ್ದವರು ಅದನ್ನು ಪಠಿಸಲಿ. ಆದರೆ ಅದರಲ್ಲಡಗಿರುವ ಹಿಂಸೆಯನ್ನು ಮತ್ತು ಚಾತುರ್ವಣ್ಯ ಜಾತಿ ಪದ್ಧತಿಯನ್ನು ಬೋಧಿಸುವುದು ಮತ್ತು ಆಚರಿಸುವುದು ಸಂವಿಧಾನ ಬಾಹಿರವಾದುದು ಎಂದು ಮನಗಾಣಬೇಕು.