ಕಾ| ಬಿ ವಿ ಕಕ್ಕಿಲ್ಲಾಯರ ಜನ್ಮಶತಾಬ್ದಿ ಕಾರ್ಯಕ್ರಮಗಳು – ಆಗಸ್ಟ್ 10, 11, 2019
ಬೆನ್ನ ಹಿಂದಿನ ಬದುಕು – ಕಣ್ಣ ಮುಂದಿನ ಬೆಳಕು
ಕಾ| ಬೇವಿಂಜೆ ವಿಷ್ಣು ಕಕ್ಕಿಲ್ಲಾಯರ ಬಗ್ಗೆ ಬರೆಯಲು ಹೊರಟರೆ ಅದೊಂದು ಪುಸ್ತಕವೇ ಆದೀತು. 1919ರ ಎಪ್ರಿಲ್ 11ರಂದು ಬೇವಿಂಜೆಯ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ ಕಕ್ಕಿಲ್ಲಾಯರು ಬದುಕಿದ್ದರೆ ಈಗ 100 ವರ್ಷವಾಗುತ್ತಿತ್ತು. ಅವರ ಸ್ಮರಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅವರ ಈ ಜನ್ಮಶತಾಬ್ದಿ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಚಳುವಳಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಆಕರ್ಷಣೆಗೆ ಒಳಗಾದ ಕಕ್ಕಿಲ್ಲಾಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ನ ಸದಸ್ಯರಾಗಿದ್ದ ಅವರು ಮಂಗಳೂರು ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1942/43ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಅವರು ನಿಷೇಧಿತ ಸಾಹಿತ್ಯ ಹೊಂದಿದ ಆರೋಪದಲ್ಲಿ ಮಂಗಳೂರಿನ ಸಬ್ಜೈಲಿನಲ್ಲಿ 9 ತಿಂಗಳ ಶಿಕ್ಷೆ ಅನುಭವಿಸಿದರು. 1943-44ರಲ್ಲಿ ಪಕ್ಷದ ಪೂರ್ಣಕಾಲ ಕಾರ್ಯಕರ್ತನಾಗಿ ಪಕ್ಷವನ್ನು ಸಂಘಟಿಸಲು ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿ ತಮ್ಮ ಸಂಘಟನಾ ಚಾತುರ್ಯವನ್ನು ಮೆರೆದರು. 1945ರಲ್ಲಿ ಅಂದಿನ ಪ್ರಮುಖ ಕಾರ್ಮಿಕ ಮುಖಂಡರಾದ ಎಸ್ ಎ ಡಾಂಗೆಯವರ ಉಪಸ್ಥಿತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಯುವಕ ಕಕ್ಕಿಲ್ಲಾಯರು 1946ರ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ ವೆಲ್ಲೂರು ಹಾಗೂ ಕಣ್ಣೂರು ಜೈಲುಗಳಲ್ಲಿ ಸ್ಥಾನಬದ್ಧತೆ ಬಂಧನಕ್ಕೊಳಗಾಗಿ 1947ರ ಅಗೋಸ್ಟು 15ರಂದು ಬಿಡುಗಡೆ ಹೊಂದಿದರು. 1950ರಲ್ಲಿ ಅವರು ದಾವಣಗೆರೆಯಲ್ಲಿ ಭೂಗತರಾಗಿದ್ದಾಗ ಪೋಲಿಸರಿಗೆ ಅವರ ಸುಳಿವು ಸಿಕ್ಕಿ ಬಂಧನಕ್ಕೊಳಗಾದರು. ಮಂಗಳೂರು ಜೈಲಲ್ಲಿ 6 ತಿಂಗಳು ಮತ್ತು ಕಡಲೂರು ಜೈಲಲ್ಲಿ 1 ತಿಂಗಳು ಜೈಲುವಾಸ ಅನುಭವಿಸಿದರು.
1952ರಲ್ಲಿ ಕಕ್ಕಿಲ್ಲಾಯರು ಮದ್ರಾಸ್ ಅಸೆಂಬ್ಲಿಯಿಂದ ರಾಜ್ಯಸಭೆಗೆ ಆರಿಸಲ್ಪಟ್ಟರು. 1955ರ ಗೋವಾ ವಿಮೋಚನೆಯಲ್ಲಿ ಕಕ್ಕಿಲ್ಲಾಯರು ಮಂಗಳೂರು ತಂಡದ ನಾಯಕರಾಗಿ ಭಾಗವಹಿಸಿದರು. 1972ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಿಂದ ರಾಜ್ಯ ವಿಧಾನ ಸಭೆಗೆ ಸ್ಪರ್ಧಿಸಿ ಜಯಶೀಲರಾದರು. ಮುಂದಿನ ಚುನಾವಣೆಯಲ್ಲಿ ಅಂದರೆ 1978ರಲ್ಲಿ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದರು.
ಕರ್ನಾಟಕದಲ್ಲಿ ಭೂಸುಧಾರಣೆ ಕಾನೂನು ಜಾರಿಗೆ ಬರಲು ಮತ್ತು ಅದು ರಾಜ್ಯದಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಲು ಕಮ್ಯುನಿಸ್ಟ್ ಪಕ್ಷ ಮಹತ್ತರ ಪಾತ್ರ ವಹಿಸಿದೆ. ಈ ಹೋರಾಟಗಳಲ್ಲಿ ಕಾ| ಕಕ್ಕಿಲ್ಲಾಯರು ಮುಂಚೂಣಿಯಲ್ಲಿದ್ದರು.
ಕಕ್ಕಿಲ್ಲಾಯರು ಒಬ್ಬ ಪ್ರಬುದ್ಧ ರಾಜಕಾರಣಿ, ಹೋರಾಟಗಾರ ಮಾತ್ರವಲ್ಲ; ಅವರು ಓದು ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಬರೆದ ‘ಕಮ್ಯುನಿಸಂ’ ಎಂಬ ಸಣ್ಣ ಪುಸ್ತಕ ಬಹಳಷ್ಟು ಜನಪ್ರಿಯವಾಗಿದೆ. ಯಾವುದೇ ಮಟ್ಟದ ಓದುಗನಿಗೆ ಕಮ್ಯುನಿಸಂ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಈ ಪುಸ್ತಕ ಸಹಾಯ ಮಾಡುತ್ತದೆ. ಇದು 4 ಬಾರಿ ಮರುಮುದ್ರಣ ಕಂಡಿದೆ. ‘ಮಾನವನ ನಡಿಗೆ ವಿಜ್ಞಾನದೆಡೆಗೆ’ ‘ಕಾರ್ಲ್ ಮಾರ್ಕ್ಸ್ ಬದುಕು ಬರಹ’ ‘ಫ್ರೆಡರಿಕ್ ಏಂಗಲ್ಸ್ ಜೀವನ, ಚಿಂತನೆ’ ‘ಭಾರತೀಯ ಚಿಂತನೆ’ ‘ಹಿಂದೂ ಧರ್ಮ’ ‘ಮಾರ್ಕ್ಸ್ವಾದ ಮತ್ತು ಭಗವದ್ಗೀತೆ’ ‘ಭಾರತಕ್ಕೊಂದು ಕವಲುದಾರಿ’ ‘ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು’ ಮುಂತಾದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ. ‘ಬರೆಯದ ದಿನಚರಿಯ ಮರೆಯದ ಪುಟಗಳು’ ಅವರ ಆತ್ಮಕಥೆಯಾಗಿದೆ.
‘ಭೂಮಿ ಮತ್ತು ಆಕಾಶ’ ‘ಇರುವು ಮತ್ತು ಅರಿವು’ ‘ಪ್ರಾಚೀನ ಭಾರತದಲ್ಲಿ ಭೌತಿಕವಾದ’ ‘ಭಾರತೀಯ ದರ್ಶನಗಳು’ ‘ಬಾಬ್ರಿ ಮಸೀದಿ ರಾಮಜನ್ಮಭೂಮಿಯ ಮೂಲ’ ‘ಪ್ರಾಚೀನ ಭಾರತದಲ್ಲಿ ಭೌತಿಕವಾದ ಮತ್ತು ಜಾತಿಗಳ ಉಗಮ’ ‘ದಲಿತರ ಸಮಸ್ಯೆಗಳು ಮತ್ತು ಪರಿಹಾರ’ ‘ಭಾರತದ ಮುಸ್ಲಿಮರು’ ಮುಂತಾದುಗಳು ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕಗಳು.
ಅವರ ‘ಕಾರ್ಲ್ ಮಾರ್ಕ್ಸ್ ಬದುಕು ಮತ್ತು ಬರಹ’ ಪುಸ್ತಕಕ್ಕೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಸಿಕ್ಕಿದೆ. ‘ಪ್ರಾಚೀನ ಭಾರತದಲ್ಲಿ ಭೌತಿಕವಾದ ಮತ್ತು ಜಾತಿಗಳ ಉಗಮ’ ಮತ್ತು ‘ಭಾರತೀಯ ದರ್ಶನಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಎಕಾಡಮಿ ಪ್ರಶಸ್ತಿ ದೊರಕಿದೆ.
ಇಂತಹ ಮಹಾನ್ ವ್ಯಕ್ತಿಯ ಜನ್ಮಶತಾಬ್ದಿ ಆಚರಿಸಿ ಅವರ ಜೀವನ, ತತ್ವನಿಷ್ಠೆ, ಆಲೋಚನೆ, ಅವರು ಹಾಕಿಕೊಟ್ಟ ದಾರಿ ಮುಂತಾದುವುಗಳ ಪರಾಮರ್ಶೆ ಮಾಡಲು ಮಂಗಳೂರಲ್ಲಿ 2019ರ ಅಗೋಷ್ಟು 10 ಮತ್ತು 11ರಂದು ಎರಡು ದಿನಗಳ ಕಾರ್ಯಕ್ರಮಗಳನ್ನು ಮಂಗಳೂರಿನ ‘ಸಮದರ್ಶಿ ವೇದಿಕೆ’ ಬೆಂಗಳೂರಿನ ‘ಎಮ್ ಎಸ್ ಕೃಷ್ಣನ್ ಸ್ಮರಣ ಸಂಸ್ಥೆ’ ಬೆಂಗಳೂರಿನ ‘ಹೊಸತು ಮಾಸಪತ್ರಿಕೆ’ ಹಾಗೂ ಬೆಂಗಳೂರಿನ ‘ನವಕರ್ನಾಟಕ ಪ್ರಕಾಶನ ಸಂಸ್ಥೆ’ ಹಮ್ಮಿಕೊಂಡಿತ್ತು.
ಈ ಸಮಾರಂಭದ ಉದ್ಘಾಟನೆಯನ್ನು ಎಐಟಿಯುಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಕಾ| ಅಮರಜಿತ್ ಕೌರ್ ಅವರು ಬಿವಿ ಕಕ್ಕಿಲ್ಲಾಯರ ಆತ್ಮಕಥೆ ‘ಬರೆಯದ ದಿನಚರಿಯ ಮರೆಯದ ಪುಟಗಳು’ ಕೃತಿಯ ಎರಡನೇ ಮುದ್ರಣವನ್ನು ಬಿಡೂಗಡೇಗೊಳಿಸುವ ಮೂಲಕ ನೆರವೇರಿಸಿದರು.
ಆ ಬಳಿಕ ಕಾ। ಅಮರಜೀತ್ ಕೌರ್ ತನ್ನ ಉದ್ಘಾಟನಾ ಭಾಷಣದಲ್ಲಿ ‘ಭಾರತದ ಸ್ವಾತಂತ್ರ್ಯ ಚಳುವಳಿಗಳಲ್ಲಿ ಮತ್ತು ದೇಶ ನಿರ್ಮಾಣದಲ್ಲಿ ಕಾರ್ಮಿಕ ವರ್ಗದ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ‘1920ರಲ್ಲಿ ಜನ್ಮತಾಳಿದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕರ ಹಿತರಕ್ಷಣೆ ಸಾಧಿಸುವುದರೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತು. ಕಮ್ಯುನಿಸ್ಟರು ನಡೆಸಿದ ಜನಪರ ಕಾರ್ಯಕ್ರಮಗಳ ಪ್ರಭಾವದಿಂದ ದೇಶದ ಮೊದಲನೆ ಪಾರ್ಲಿಮೆಂಟಲ್ಲಿ ಸಿಪಿಐ ಪ್ರಧಾನ ಪ್ರತಿಪಕ್ಷವಾಗಿ ಮೂಡಿಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಎಐಟಿಯುಸಿ ಕಾರ್ಮಿಕರ ಪರವಾದ ಅನೇಕ ಕಾನೂನುಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಸಿಪಿಐ ಹುಟ್ಟಿದ ವರ್ಷ ಅಂದರೆ 1925ರಲ್ಲಿ ಹುಟ್ಟಿಕೊಂಡ ಆರ್ಎಸ್ಎಸ್ ದೇಶದ ಸ್ವಾತಂತ್ರ್ಯ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳದೆ ಬ್ರಿಟೀಷರ ಸಹವರ್ತಿಯಂತೆ ವರ್ತಿಸುತ್ತಿತ್ತು. ಸ್ವಾತಂತ್ರ್ಯಾನಂತರವೂ ಬಲಪಂಥೀಯ ಧೋರಣೆಗಳನ್ನು ಮುಂದುವರಿಸಿ, ಜನರನ್ನು ಜಾತಿ ಧರ್ಮಗಳ ಆಧಾರದಲ್ಲಿ ವಿಂಗಡಿಸಿ, ಸುಳ್ಳುಗಳ ಕಂತುಗಳಿಂದ ಜನರನ್ನು ಮರುಳುಗೊಳಿಸಿ ಅಧಿಕಾರ ಪಡೆದು ತಮ್ಮ ಬಲಪಂಥೀಯ ಧೋರಣೆಗಳನ್ನು ಅನುಷ್ಠಾನಗೊಳಿಸಲು ಹೊರಟಿದೆ. ಇದರ ವಿರುದ್ಧ ಹೋರಾಡುವ ದೊಡ್ಡ ಜವಾಬ್ದಾರಿ ಕಾರ್ಮಿಕ ವರ್ಗ ಮತ್ತು ಜನಸಾಮಾನ್ಯರ ಮುಂದಿದೆ. ಕಾರ್ಮಿಕ ಕಾನೂನುಗಳನ್ನು ನಿರ್ಬಲಗೊಳಿಸಲಾಗುತ್ತಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಲಕ್ಷಗಟ್ಟಲೆ ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ವಿರುದ್ಧ ದೇಶದ ಎಲ್ಲಾ ಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟಗಳನ್ನು ನಡೆಸಿದ್ದೇವೆ ಮತ್ತು ಮುಂದೆ ನಡೆಸಲಿದ್ದೇವೆ.’ ಎಂದು ಕಾ| ಕೌರ್ ಹೇಳಿದರು.
ನಂತರ ನಡೆದ ‘ಭಾರತದ ಯುವಜನ ಕವಲುದಾರಿಯಲ್ಲಿ’ ಎಂಬ ಗೋಷ್ಠಿಯಲ್ಲಿ ಯುವಜನರ ಆಶಾಕಿರಣ, ದೆಹಲಿಯ ಜವಹರಲಾಲ್ ನೆಹರು ಯುನಿವರ್ಸಿಟಿಯ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷ, ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಲಿ ಸದಸ್ಯ ಕಾ| ಡಾ| ಕನ್ಹಯ್ಯ ಕುಮಾರ್ ಮತ್ತು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕಾ| ಅಮರಜೀತ್ ಕೌರ್ ಭಾಗವಹಿಸಿದರು.
ಮೊದಲಿಗೆ ಮಾತನಾಡಿದ ಡಾ. ಕನ್ಹಯ್ಯ ‘ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎಫ್) ನಲ್ಲಿದ್ದ ಕಕ್ಕಿಲಾಯರು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದಾಗ ಅವರಿಗೆ ರಾಷ್ಟ್ರದ್ರೋಹಿ ಎಂದು ಬಿರುದು ಕೊಟ್ಟು ಅವರನ್ನು ಜೈಲಿಗಟ್ಟಿದ್ದರು. ಈಗ ಅದೇ ಎಐಎಸ್ಎಫ್ ನಲ್ಲಿದ್ದು ಸರಕಾರದ ಜನವಿರೋಧಿ ಧೋರಣೆಗಳನ್ನು ಪ್ರಶ್ನಿಸಿದ ನನ್ನನ್ನು ರಾಷ್ಟ್ರದ್ರೋಹಿ ಎಂದು ಹೆಸರಿಸಿ ಜೈಲಿಗಟ್ಟಿರುವರು. ಸ್ವಾತಂತ್ರ್ಯ ಹೋರಾಟ ಮುಗಿದಿಲ್ಲ; ಅದು ಮುಂದುವರಿಯುತ್ತಿದೆ. ಅದರಲ್ಲಿ ಭಾಗವಹಿಸಬೇಕಿದ್ದ ಯುವಜನರು, ಅದರ ಬದಲಾಗಿ ಮತಾಂಧತೆಯಿಂದ ನರಳುತ್ತಿದ್ದು ಅಡ್ಡದಾರಿಯಲ್ಲಿ ಸಾಗಿದ್ದಾರೆ. ಅವರ ತಪ್ಪು ಅಭಿಪ್ರಾಯಗಳನ್ನು ತಿದ್ದುವ ಕೆಲಸ ಇಂದು ನಡೆಯಬೇಕಿದೆ.
ತಂತ್ರಜ್ಞಾನದ ಅವಿಷ್ಕಾರಗಳಿಂದಾಗಿ ದಿನದಿಂದ ದಿನಕ್ಕೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ತಮ್ಮ ಲಾಭಗಳಿಕೆ ಹೆಚ್ಚಿಸುವ ಭರಾಟೆಯೊಂದಿಗೆ ಬಂಡವಾಳಿಗರು ಜನರನ್ನು ಶೋಷಿಸುತ್ತಿದ್ದಾರೆ. ಇದರಿಂದ ಕಾರ್ಮಿಕರು, ಯುವಜನರು, ಜನಸಾಮಾನ್ಯರು, ಮಹಿಳೆಯರು, ವಿದ್ಯಾರ್ಥಿಗಳು, ದಲಿತರು ಮುಂತಾದವರು ಕಂಗಾಲಾಗಿದ್ದಾರೆ. ಇವರೆಲ್ಲರ ಸಾಮರಸ್ಯ ಒಡೆದು ಹೋಗಿ ಸಣ್ಣ ಗುಂಪುಗಳಾಗಿದ್ದಾರೆ. ಹೋರಾಟ ನಡೆಸುತ್ತಿದ್ದರೂ ಅವು ದುರ್ಬಲವಾಗಿವೆ. ಶೋಷಣೆ ಮುಂದುವರಿಯುತ್ತಿದೆ.
ತಂತ್ರಜ್ಞಾನ ಅವಿಷ್ಕಾರಗಳನ್ನು ವಿರೋಧಿಸುವ ಬಲಪಂಥೀಯರು ಅದೇ ತಂತ್ರಜ್ಞಾನಗಳನ್ನು ಜನರನ್ನು ಜಾತಿ ಧರ್ಮದ ಆಧಾರದಲ್ಲಿ ಒಡೆಯುವ, ಸುಳ್ಳು ಸುದ್ದಿಗಳನ್ನು ಪ್ರಚಾರಪಡಿಸಿ ಅದನ್ನೇ ಸತ್ಯವೆಂದು ನಂಬಿಸುವ ತಂತ್ರದಲ್ಲಿ ಯಶಸ್ವಿಯಾಗಿದ್ದು ಅಧಿಕಾರ ಪಡೆದುಕೊಂಡಿದ್ದಾರೆ. ಯುವಜನರನ್ನು ಪೂರ್ತಿ ದಾರಿ ತಪ್ಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಯುವಕರನ್ನು ಮತ್ತೆ ಸರಿದಾರಿಯಲ್ಲಿ ತರುವುದು ನಮ್ಮ ಕೆಲಸವಾಗಿದೆ. ಆದರೆ ಅದು ಹೇಳಿದಷ್ಟು ಸುಲಭವಲ್ಲ.
ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಬೆಳೆಸಿ ಅವರನ್ನು ಪ್ರಗತಿಪರರಾಗಿ ಪರಿವರ್ತಿಸಲು ಪ್ರಯತ್ನಿಸುವ ವಿಶ್ವವಿದ್ಯಾಲಯಗಳನ್ನು ಖಂಡಿಸುವ ಮತ್ತು ಯುವಜನರನ್ನು ಯಂತ್ರಗಳಾಗಿ ಪರಿವರ್ತಿಸಿ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ವಿದ್ಯಾಸಂಸ್ಥೆಗಳನ್ನು ಬೆಳೆಸುವ ವ್ಯವಸ್ಥೆ ನಮ್ಮ ಮುಂದಿದೆ. ವಿದ್ಯಾರ್ಥಿಗಳು ತಾವು ಮುಂದೇನಾಗಬೇಕು ಎಂದು ತಾವೇ ನಿರ್ಧರಿಸುವ ಹಕ್ಕನ್ನೂ ಕಳೆದುಕೊಂಡಿದ್ದಾರೆ.
ಪ್ರಜಾತಂತ್ರ, ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಗಳನ್ನು ತೊಡೆದುಹಾಕುವ ಪ್ರಯತ್ನಗಳು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದರೂ ಅವುಗಳನ್ನು ಅಳಿಸಲು ಯಾರಿಗೂ ಸಾಧ್ಯವಿಲ್ಲ. ಈಗಿರುವ ಪರಿಸ್ಥಿತಿ ತಾತ್ಕಾಲಿಕ ಅಷ್ಟೆ. ಈ ಪ್ರಯತ್ನಗಳನ್ನು ಒಟ್ಟಾರೆಯಾಗಿ ವಿರೋಧಿಸಿ ಪ್ರಜಾಪ್ರಭುತ್ವವನ್ನು ಶಾಶ್ವತಗೊಳಿಸುವ ಹೊಣೆ ಯುವಜನರದಾಗಿದೆ.’ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಕಾ| ಅಮರಜಿತ್ ಕೌರ್ AISF, AITUC, IPTA, CPI ಮತ್ತು ಇನ್ನಿತರ ಎಡ ಸಂಘಟನೆಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಡೆಸಿದ ಹೋರಾಟಗಳನ್ನು ವಿವರಿಸಿದರು. ಈ ತತ್ವಗಳನ್ನು ಉಳಿಸಿ ಬೆಳೆಸಲು ನಡೆಸುತ್ತಿರುವ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಅವರು ಒತ್ತಿ ಹೇಳಿದರು.
ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಭಿಕರು ಕೇಳಿದ ಪ್ರಶ್ನೆಗಳಿಗೆ ಕನ್ಹಯ್ಯ ಮತ್ತು ಕೌರ್ ಯಶಸ್ವಿಯಾಗಿ ಉತ್ತರಿಸಿದರು. ಕೊನೆಯಲ್ಲಿ ಸಂಘಪರಿವಾರಕ್ಕೆ ಸೇರಿದ ಯುವತಿಯೊಬ್ಬಳು ಕನ್ಹಯ್ಯರವರಿಗೆ ಕೇಳಿದ ಪ್ರಶ್ನೆ ಮತ್ತು ಕನ್ಹಯ್ಯ ನೀಡಿದ ಉತ್ತರ ಬಹಳಷ್ಟು ರೋಚಕವಾಗಿದ್ದು ಅದಕ್ಕೆ ಸಂಬಂಧಿತ ವೀಡಿಯೋ ವೈರಲ್ ಆಗಿ ಮಿಲಿಯಗಟ್ಟಲೆ ಜನ ಅದನ್ನು ವೀಕ್ಷಿಸಿದರು ಮತ್ತು ಪ್ರಶಂಸೆಯ ಸರಮಾಲೆಯೇ ಬಂದವು.
‘ಜೈ ಶ್ರೀರಾಂ’ ಎಂಬ ಘೋಷಣೆಯೊಂದಿಗೆ ಪ್ರಶ್ನೆ ಪ್ರಾರಂಬಿಸಿದ ಆ ಯುವತಿ ಕನ್ಹಯ್ಯರೇಕೆ ಒಂದೇ ದೇಶ, ಒಂದೇ ವಿದ್ಯಾರ್ಥಿ ಸಂಘಟನೆ, ಒಂದೇ ರಾಷ್ಟ್ರನೀತಿ ಮತ್ತು ಏಕತೆಯನ್ನು ಪ್ರತಿಪಾದಿಸುವುದಿಲ್ಲ ಎಂದು ಕೇಳಿದಳು.
ಡಾ. ಕನ್ಹಯ್ಯ ಉತ್ತರಿಸುತ್ತಾ ‘ಏಕ ಮತ್ತು ಏಕತೆ ಭಿನ್ನವಾಗಿದ್ದು ಅದರ ಬಗ್ಗೆ ತಾವು ತಪ್ಪು ತಿಳಿದಿದ್ದೀರಿ. ಏಕದಿಂದ ಯಾವುದೂ ಸಾಧ್ಯವಿಲ್ಲ. ನಾನು ನನ್ನ ತಂದೆತಾಯಿಗಳ ಜೊತೆಗೂಡುವಿಕೆಯಿಂದ ಹುಟ್ಟಿರುವೆನೇ ಹೊರತು ಒಬ್ಬರಿಂದಲ್ಲ. ಒಂದೇ ದೇಶ ಎಂಬುದನ್ನು ನಾನು ಖಂಡಿತ ಒಪ್ಪಿಕೊಳುತ್ತೇನೆ. ಆದರೆ ಈ ದೇಶ ಒಂದು ಸಂವಿಧಾನದ ಚೌಕ್ಕಟ್ಟಿನೊಳಗೆ ಕೆಲಸ ಮಾಡುತ್ತಿದೆ. ಅದರಲ್ಲಿ 300ರಕ್ಕೂ ಹೆಚ್ಚಿನ ವಿಧಿಗಳಿವೆ. ಸಂವಿಧಾನದ ಅಡಿಯಲ್ಲಿ ಪಾರ್ಲಿಮೆಂಟಿದೆ. ಆದರೆ ಅದರಲ್ಲೂ ಎರಡು ಸದನಗಳಿವೆ. ಆ ಸದನಗಳಲ್ಲಿ ಅನೇಕ ಚುನಾಯಿಸಲ್ಪಟ್ಟ ಸಂಸದರಿದ್ದಾರೆ. ಆದ್ದರಿಂದ ನಾವು ಅನುಸರಿಸುತ್ತಿರುವುದು ಏಕ ಅಲ್ಲ ಅದು ಬಹುತ್ವ ಅಥವಾ ವಿವಿಧತೆ. ವಿವಿಧತೆಯಲ್ಲಿ ಏಕತೆ ಮಾತ್ರ ಸಾಧ್ಯವೇ ಹೊರತು ಏಕದಿಂದಲ್ಲ.
ನೀವು ಜೈ ಶ್ರೀರಾಂ, ಜೈ ಹನುಮಾನ್ ಅಥವಾ ಬೇರೆ ಏನನ್ನಾದರೂ ಹೇಳುವ ಸ್ವಾತಂತ್ರವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಆದ್ದರಿಂದ ದಯವಿಟ್ಟು ‘ಜೈ ಸಂವಿಧಾನ’ ಎಂದು ಹೇಳಲು ಕೂಡ ಮರೆಯದಿರಿ.
ನಾನು ಮಿಥಿಲಾ ಪ್ರಂತ್ಯಕ್ಕೆ ಸೇರಿದ ಬೇಗುಸರಾಯಿಯಲ್ಲಿ ಹುಟ್ಟಿದವ. ನಮ್ಮಲ್ಲಿ ದೇವರುಗಳನ್ನು ಹೆಸರಿಸುವಾಗ ಅವರ ಹೆಸರಿನ ಜೊತೆ ಅವರ ಪತ್ನಿಯವರನ್ನೂ ಸೇರಿಸಿ ಸೀತಾರಾಂ, ರಾಧೇಕೃಷ್ಣ ಎಂದು ಸಂಭೋದಿಸುತ್ತೇವೆ. ಮಿಥಿಲೆಯಲ್ಲಿ ಪ್ರತಿ ವರ್ಷ ರಾಮನ ಮದುವೆ ಎಂಬ ಜಾತ್ರೆ ನಡೆಯುತ್ತಿದೆ. ಆ ಜಾತ್ರಗೆ ಅಯೋಧ್ಯೆಯಿಂದ ಅನೇಕ ಯುವಕರು ರಾಮ-ಲಕ್ಷ್ಮಣರ ವೇಷ ಧರಿಸಿ ಬರುತ್ತಾರೆ. ಅವರನ್ನು ಕೀಟಲೆ-ಬೈಗಳೊಂದಿಗೆ ಸ್ವಾಗತಿಸುವ ಪರಿಪಾಠ ಮಿಥಿಲೆಯಲ್ಲಿ ಇಂದಿಗೂ ನಡೆದಿದೆ. ಇದು ಅಲ್ಲಿನ ಸಂಸ್ಕೃತಿ. ಹೀಗೆ ಅನೇಕ ವಿಬಿನ್ನ ಸಂಸ್ಕೃತಿ-ಆಚರಣೆಗಳು ಭಾರತದೆಲ್ಲೆಡೆ ಹರಡಿದೆ. ನಮ್ಮ ದೇಶದಲ್ಲಿ ಸಾಧಾರಣ 300ಕ್ಕೂ ಹೆಚ್ಚು ರಾಮಾಯಣಗಳು ಪ್ರಚಲಿತದಲ್ಲಿದೆ. ಲಾಹೋಲ್ ಜಿಲ್ಲೆಯಲ್ಲಿ ಪ್ರಚಲಿತವಿರುವ ರಾಮಾಯಣದ ಪ್ರಕಾರ ಸೀತೆ ರಾವಣನ ಮಗಳು. ರಾಮ ಅವಳನ್ನು ಪ್ರೀತಿಸಿ ಮದುವೆಯಾದ. ಆದರೆ ರಾವಣನಿಗೆ ಅದು ಇಷ್ಟವಿರಲಿಲ್ಲ. ಅದಕ್ಕಾಗಿ ರಾಮ ರಾವಣರ ಮಧ್ಯೆ ಯುದ್ಧವಾಯಿತು. ಹಿಮಾಚಲ ಪ್ರದೇಶದಲ್ಲಿ ತ್ರಿಲೋಕನಾಥ ದೇವಾಲಯವಿದೆ. ಅಲ್ಲಿ ಬುದ್ಧನ ಮೂರ್ತಿಯ ತಲೆ ಮೇಲೆ ಈಶ್ವರನ ಮೂರ್ತಿ ಇದೆ. ಈ ದೇವಸ್ಥಾನದಲ್ಲಿ ಮೊದಲು ಹಿಂದು ಅರ್ಚಕರು ಪೂಜೆ ಮಾಡಿದ ಬಳೀಕ ಬೌದ್ಧ ಬಿಕ್ಕುಗಳು ಪರಿಕ್ರಮ ನಡೆಸುತ್ತಾರೆ. ಹೀಗೆ ಭಾರತ ವಿವಿಧತೆ ಹೊಂದಿದ ದೊಡ್ಡ ದೇಶವಾಗಿದೆ.
ಇದನ್ನೆಲ್ಲಾ ತಿಳಿಯಲು ನೀವು ಇಡೀ ದೇಶವನ್ನು ಸುತ್ತುವುದೊಳಿತು. ಆವಾಗ ಮಾತ್ರ ನಮ್ಮ ದೇಶದ ವಿವಿಧತೆ, ಅಗಾಧತೆ ಮತ್ತು ಸೌಂದರ್ಯಗಳ ಬಗ್ಗೆ ನಮಗೆ ಅರಿವಾಗುತ್ತದೆ. ಬೇರೆ ಬೇರೆ ಊರುಗಳಲ್ಲಿ ಉಂಟಾಗುವ ವಿಶಿಷ್ಟ ಹಾಗೂ ವಿಬಿನ್ನ ಅನುಭವಗಳು ನಿಜಕ್ಕೂ ರೋಚಕವಾಗಿರುತ್ತದೆ. ದೇಶದ ಅಗಾಧತೆಯನ್ನು ವೀಕ್ಷಿಸಿದಾಗ ನಾವೆಷ್ಟು ಸಣ್ಣವರು ಎಂಬ ಅರಿವು ನಮಗಾಗುತ್ತದೆ.
ನಾವು ನಮ್ಮ ತಾಯಿಯನ್ನು ಪ್ರೀತಿಸುತ್ತೇವೆ. ಆದರೆ ಯಾರೋ ಒಬ್ಬ ಯಾವುದೋ ಒಂದು ಧ್ವಜವನ್ನು ಹಿಡಿದುಕೊಂಡು ಬಂದು ನಿಮಗಿಷ್ಟವಿಲ್ಲದ ಯಾವುದೋ ಘೋಷಣೆಯನ್ನು ನಿನಗೆ ನಿನ್ನ ತಾಯಿಯ ಮೇಲೆ ಪ್ರೀತಿಯಿದ್ದರೆ ಕೂಗು ಎಂದು ಹೇಳಿದರೆ ನೀವು ಖಂಡಿತ ಹಾಗೆ ಮಾಡಲಾರಿರಿ ಎಂಬ ನಂಬಿಕೆ ನನಗಿದೆ.
ಈ ದೇಶ ನನ್ನದು. ನನ್ನ ದೇಶದ ಬಗ್ಗೆ ನನಗೆ ಬಹಳಷ್ಟು ಅಭಿಮಾನವಿದೆ. ಆದರೆ ಆ ಅಭಿಮಾನ ಒಂದು ತೋರಿಕೆಯ ವಸ್ತುವಲ್ಲ. ಅದನ್ನು ನಾನು ನನ್ನ ಎದೆಯಲ್ಲಿ ಹೊತ್ತುಕೊಂಡು ಮುಂದುವರಿಯುತ್ತೇನೆ.’ ಎಂದು ಹೇಳಿದರು.
ಅವರ ಈ ಉತ್ತರವನ್ನು ಸಭಿಕರು ಧೀರ್ಘ ಕರತಾಡನದೊಂದಿಗೆ ಸ್ವಾಗತಿಸಿದರು. ಸರಿಯಾದ ರೀತಿಯಲ್ಲಿ ಆಲೋಚಿಸುವ ಪರಿ ಹೊಂದಿದವಳಾಗಿದ್ದರೆ ಈ ಯುವತಿ ಖಂಡಿತ ಬದಲಾಗಲಿದ್ದಾಳೆ.
ಇನ್ನಷ್ಟು ಕೊಂಡಿಗಳು:
ಕನ್ನಡ ಉಪಠ್ಯದೊಂದಿಗೆ ಪ್ರಜಾವಾಣಿ ವಿಡಿಯೋ:
- https://www.facebook.com/brutindia/videos/423535411597598/
- Watch: Kanhaiya Kumar’s viral video explaining unity in diversity – https://indianexpress.com/article/trending/viral-videos-trending/kanhiya-kumar-explaining-one-india-notion-unity-in-diversity-in-mangalore-is-going-viral-5899311/
- Girl Greets Kanhaiya With ‘Jai Shri Ram’, Here’s What He Replied – https://www.thequint.com/news/politics/kanhaiya-kumar-mangalore-student-jai-shree-ram-one-nation-unity-in-diversity
- https://scroll.in/video/933686/this-video-of-kanhaiya-kumar-has-gone-viral-he-explains-why-diversity-is-what-unites-india
- Kanhaiya Kumar’s Reply to Woman Who Asked Him to Say ‘Jai Hind’ is Going Viral : https://www.india.com/news/india/kanhaiya-kumars-reply-to-woman-who-asked-her-to-say-jai-hind-is-going-viral-watch-3743730/
- https://www.younews.in/news/kanhiya-kumar%E2%80%99s-video-explaining-unity-in-diversity-is-going-viral/
- http://binj.in/fashion/kanhaiya-kumars-video-explaining-unity-in-diversity-is-going-viral/
- http://www.mangaloretoday.com/mainnewsprint/Girl-greets-Kanhaiya-Kumar-with-Jai-Shri-Ram-in-Mangaluru-here-s-what-he-replied.html
- Kanhaiya Kumar Explains Meaning of ‘Unity in Diversity’, Video Goes Viral: https://insidene.com/2019/08/13/kanhaiya-kumar-explains-meaning-of-unity-in-diversity-video-goes-viral/
- ‘জয় শ্রীরাম’ স্লোগানে কানহাইয়াকে সম্ভাষণ, জবাবে তিনি কী বললেন: https://www.khaboronline.com/news/national/girl-greets-kanhaiya-kumar-with-jai-shri-ram-his-reply-goes-viral-on-social-media/
- http://www.inshorts.com/en/news/kanhaiya-responds-to-girl-greeting-him-with-jai-shri-ram-video-viral-1565713944694
ಇಂಥವು ಇಲ್ಲಿ ಇನ್ನಷ್ಟಿವೆ!
ಮಧ್ಯಾಹ್ನದ ನಂತರ ನಡೆದ ಗೋಷ್ಠಿ ‘ರಾಷ್ಟ್ರೀಯ ಪ್ರಜಾಪ್ರಭುತ್ವವಾದಿ ಕ್ರಾಂತಿ.’
ಕಾ| ಕಳಲೆ ಪಾರ್ಥಸಾರಥಿ ವಿಷಯ ಮಂಡನೆ ಮಾಡುತ್ತಾ ಸರ್ವಾಧಿಕಾರದಿಂದ ಹಿಡಿದು ಪ್ರಜಾಪ್ರಭುತ್ವದ ವರೆಗಿನ ಬೆಳವಣಿಗೆಗಳನ್ನು ವಿವರಿಸಿದರು. ಅವರು ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪ್ರಕಾರಗಳ ಒಳಿತು ಕೆಡಕುಗಳ ವಿಶ್ಲೇಷಣೆ ಮಾಡಿದರು. ಭಾರತದಂತಹ ದೇಶಗಳಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಜನರು ಜಾಗರೂಕರಾಗಿದ್ದು ಸರಕಾರದ ನಡೆಗಳನ್ನು ಪ್ರಶ್ನಿಸುತ್ತಿರಬೇಕು. ಚುನಾವಣೆಗಳಲ್ಲಿ ಹಣಬಲ ಭುಜಬಲ ಕೆಲಸ ಮಾಡದಂತೆ ನೋಡಿಕೊಳ್ಳಬೇಕು. ಅದಾಗದಿದ್ದಲ್ಲಿ ಪ್ರಜಾಪ್ರಭುತ್ವ ಅಳಿಸಿಹೋಗಿ ನಿರಂಕುಶ ಪ್ರಭುತ್ವ ಸ್ಥಾಪಿಸಲ್ಪಡುವ ಸಾಧ್ಯತೆಗಳಿವೆ ಎಂದರು.
ಪತ್ರಕರ್ತ ಶ್ರೀ ದಿನೇಶ್ ಅಮೀನ್ ಮಟ್ಟು ಪ್ರತಿಕ್ರಿಯಿಸುತ್ತಾ ಭಾರತದಲ್ಲಿ ಎಡರಂಗದ ವೈಫಲ್ಯಗಳ ಬಗ್ಗೆ ವಿವರಿಸಿದರು. ನಮ್ಮ ದೇಶದ ಜಾತಿ ಪದ್ಧತಿಯ ನಿರ್ಮೂಲನ ಅಸಾಧ್ಯ. ಈ ಸತ್ಯವನ್ನು ಕಮ್ಯುನಿಷ್ಟರು ಒಪ್ಪಿಕೊಳ್ಳದೆ ತಪ್ಪೆಸಗಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಕಮ್ಯುನಿಸ್ಟರು ಡಾ| ಬಿ ಆರ್ ಅಂಬೇಡ್ಕರರನ್ನು ತಮ್ಮ ಮುಂದಾಳಾಗಿ ಸ್ವೀಕರಿಸಬೇಕಿತ್ತು ಅಥವಾ ಅವರ ನಿಲುವುಗಳನ್ನು ಒಪ್ಪಿಕೊಳ್ಳಬೇಕಿತ್ತು. ಹಾಗಾಗಿದ್ದಲ್ಲಿ ಭಾರತದಲ್ಲಿ ಕಮ್ಯುನಿಸ್ಟರು ಅಪಾರವಾಗಿ ಬೆಳೆಯಲು ಸಾಧ್ಯವಿತ್ತು. ಅಧಿಕಾರಕ್ಕೆ ಬರುವ ಸಾಧ್ಯತೆಗಳೂ ಅಪಾರವಾಗಿತ್ತು. ಕಮ್ಯುನಿಸ್ಟರ ತತ್ವನಿಷ್ಠೆ, ತ್ಯಾಗ, ಬಲಿದಾನ, ಹೋರಾಟ ಮನೋಭಾವ ಮುಂತಾದುವುಗಳು ಪ್ರಶ್ನಾತೀತ. ಆದರೆ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸರಿಯಾಗಿ ಸ್ಪಂದಿಸದ ಕಾರಣದಿಂದಾಗಿ ಅವರು ಈಗ ಹಿಂದೆ ಸರಿದಿದ್ದಾರೆ ಎಂದು ಹೇಳಿದರು.
ನಂತರದ ಗೋಷ್ಠಿ ‘ದಮನಿತರ ಹೋರಾಟಗಳು – ಸಿದ್ದಾಂತ ಮತ್ತು ಕ್ರಿಯೆ’
ಈ ಬಗ್ಗೆ ಪ್ರೊಫೆಸರ್ ಆನಂದ ತೇಲ್ತುಂಬ್ಡೆ ವಿಚಾರ ಮಂಡಿಸುತ್ತಾ ದಮನಿತರ ಅಥವಾ ತುಳಿತಕ್ಕೊಳಗಾದವರ ವಿಮೋಚನೆ ಬಗೆಗಿನ ಮಾರ್ಕ್ಸ್ ಮತ್ತು ಅಂಬೇಡ್ಕರರ ನಿಲುವು ಒಂದೇ ಆಗಿತ್ತು. ಆದರೆ ಅವರಿಬ್ಬರ ಕಾರ್ಯವಿಧಾನ ಭಿನ್ನವಾಗಿತ್ತು. ಭಾರತದಲ್ಲಿ ಜಾತಿ ತಾರತಮ್ಯಗಳನ್ನು ಹೋಗಲಾಡಿಸದೆ ವರ್ಗ ಸಂಘರ್ಷ ಅಸಾಧ್ಯ. ಜಾತಿ, ಅಸಮಾನತೆ, ಲಿಂಗಬೇಧ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟಗಳಲ್ಲಿ ಮತ್ತು ಶೋಷಣೆರಹಿತ ಸಮಾಜ ಕಟ್ಟುವಲ್ಲಿ ಎಲ್ಲಾ ಶಕ್ತಿಗಳು ಒಗ್ಗೂಡಬೇಕಂದು ಅವರು ಕರೆಯಿತ್ತರು.
ನಂತರ ಮಾತನಾಡಿದ ಕಾ| ಕನ್ಹಯ್ಯ ಕುಮಾರರು ತನ್ನ ಘೋಷಣೆಯಾದ ‘ಜೈ ಭೀಮ್ ಲಾಲ್ ಸಲಾಮ್’ ಹಿಂದಿರುವ ತತ್ವ ಹಾಗೂ ಸಮಕಾಲೀನ ಪ್ರಶ್ನೆಗಳ ಬಗ್ಗೆ ವಿವರಣೆಯಿತ್ತರು.
ಭಾರತೀಯ ಜನ ಕಲಾ ಸಮಿತಿ ( IPTA) ಕರ್ನಾಟಕ ತಂಡದ ಕೆಲ ಕಾರ್ಯಕ್ರಮಗಳೊಂದಿಗೆ ಅಂದಿನ ಸಭೆ ಮುಕ್ತಾಯವಾಯಿತು. ಬೇರೆ ಬೇರೆ ಗೋಷ್ಠಿಗಳ ಮಧ್ಯೆ ಈ ತಂಡ ನೀಡಿದ ಕ್ರಾಂತಿಗೀತೆಗಳು ಸುಶ್ರಾವ್ಯವಾಗಿತ್ತು ಮತ್ತು ಸ್ಪೂರ್ತಿದಾಯಕವಾಗಿತ್ತು.
ಎರಡನೆ ದಿನದ ಸಭೆಯ ಮೊದಲಲ್ಲಿ ಕಾ| ಸಿದ್ದನಗೌಡ ಪಾಟೀಲರು ‘ಕಾ| ಬಿ ವಿ ಕಕ್ಕಿಲ್ಲಾಯ-ಮಲಬಾರಿಂದ ಕರ್ನಾಟಕ ವಿಧಾನಸಭೆ ವರೆಗೆ’ ಎಂಬ ವಿಷಯದ ಬಗ್ಗೆ ಮಾತಾಡುತ್ತಾ ಕಕ್ಕಿಲ್ಲಾಯರ ಬದುಕಿನ ಪೂರ್ಣ ಚಿತ್ರಣವನ್ನು ಸಭೆಯ ಮುಂದಿಟ್ಟರು.
ಎರಡನೇ ದಿನದ ಮೊದಲ ಗೋಷ್ಠಿ ‘ಕರ್ನಾಟಕದಲ್ಲಿ ಭೂಸುಧಾರಣೆ- ಎಲ್ಲಿಂದ ಎಲ್ಲಿಗೆ?’
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀ ಚಂದ್ರ ಪೂಜಾರಿಯವರು ಮಾತನಾಡುತ್ತಾ ‘ಕರ್ನಾಟಕದಲ್ಲಿ ಭೂಸುದಾರಣೆ ಕಾನೂನು ಜಾರಿಯಾದಾಗ ದಕ್ಷಿಣ ಕನ್ನಡದ 1 ಲಕ್ಷಕ್ಕೂ ಮಿಕ್ಕಿದ ರೈತ ಕುಟುಂಬಗಳಿಗೆ ಅನುಕೂಲವಾಯ್ತು. ಇದರಿಂದ ಒಂದು ಸಾಮಾಜಿಕ ಕ್ರಾಂತಿ ಉಂಟಾಯಿತು. ಸಮಾಜದ ಹಿಂದುಳಿದ ವರ್ಗಗಳು ಶಕ್ತಿಯುತವಾಗಿ ಅವರ ಜೀವನ ಮಟ್ಟ ಸುಧಾರಿಸುವುದರೊಂದಿಗೆ ಅವರ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಸ್ಥಾನ ಗಳಿಸುವುದರೊಂದಿಗೆ ಸಮಾಜದಲ್ಲಿ ಗುರುತಿಸಲ್ಪಟ್ಟರು. ಈ ಕಾನೂನಿನ ಜಾರಿಗಾಗಿ ಶ್ರಮಿಸಿದ ಕಾಂಗೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಅಭ್ಯರ್ಥಿಗಳು ಕೆಲ ವರ್ಷಗಳ ವರೆಗೆ ಚುನಾವಣೆಗಳಲ್ಲಿ ಅತ್ಯಂತ ಬಹುಮತದಿಂದ ಚುನಾಯಿರಾದರು. 1990ರ ನಂತರದಲ್ಲಿ ಬಂದ ಹೊಸ ಪೀಳಿಗೆಗೆ ಇವೆಲ್ಲದರ ಅರಿವಿರಲಿಲ್ಲ ಮತ್ತು ಅವರು ಜಾತಿರಾಜಕಾರಣದಿಂದ ಪ್ರಭಾವಿತರಾದ ಕಾರಣದಿಂದ ಚುನಾವಣೆಗಳಲ್ಲಿ ಎಡಪಕ್ಷಗಳು ಅಳಿಸಿಹೋದವು ಮತ್ತು ಕಾಂಗ್ರೆಸ್ ಹಿಂದೆ ಸರಿಯುವಂತಾಯಿತು.’ ಎಂದರು.
ನಂತರ ಮಾತನಾಡಿದ ಶ್ರೀ ದಿನೇಶ್ ಅಮೀನ್ ಮಟ್ಟು ಮಾತನಾಡಿ ಅಂದಿನ ಮುಖ್ಯಮಂತ್ರಿಯವರಾಗಿದ್ದ ಶ್ರೀ ದೇವರಾಜ ಅರಸರ ಭೂಸುಧಾರಣೆ ಕಾನೂನು ಜಾರಿ ಒಂದು ಅವಸರದ ಕ್ರಾಂತಿಯಾಗಿತ್ತು ಎಂದು ಅಭಿಪ್ರಾಯಪಟ್ಟರು. ಈ ಕಾನೂನು ಜಾರಿಯಾದ ನಂತರದಲ್ಲಿ ಅರಸರು ಒಹಳಷ್ಟು ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯದಲ್ಲಿ ಅವಕಾಶ ಮಾಡಿ ಕೊಟ್ಟರು. ಆದೂ ಒಂದು ಅವಸರದ ಕ್ರಮವಾಗಿದ್ದು ಈ ಹೊಸ ನಾಯಕರು ಕಾಂಗ್ರೆಸ್ಸಿನ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು.’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಪಿಐನ ಹಿಂದಿನ ರಾಜ್ಯ ಕಾರ್ಯದರ್ಶಿ ಕಾ| ಪಿ ವಿ ಲೋಕೇಶರು ಭೂಸುಧಾರಣೆ ಕಾನೂನು ತರುವಲ್ಲಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಸಿಪಿಐ ಪಕ್ಷದ ಕೊಡುಗೆ ಅಪಾರವಾಗಿತ್ತು ಎಂದರು. ಎಡಪಕ್ಷಗಳು ಶಕ್ತಿಯುತವಾಗಿದ್ದಲ್ಲಿ ಭೂಸುಧಾರಣೆ ಕಾನೂನು ಯಶಸ್ವಿಯಾಗಿ ಜಾರಿಯಾಗಿತ್ತು. ಆದರೆ ಉಳಿದೆಡೆ ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಭೂಸುಧಾರಣೆ ಕಾನೂನಿನ ಜಾರಿಯಿಂದಾಗಿ ಬಹಳಷ್ಟು ಭೂಮಿ ಸರಕಾರದ ವಶಕ್ಕೆ ಬಂದಿತು. ಆದರೆ ಅದರ 38% ಮಾತ್ರ ವಿತರಣೆಯಾಗಿದೆ. ಉಳಿದ ಭೂಮಿಯಲ್ಲಿ ಅನೇಕರು ಕೃಷಿ ಮಾಡಿಕೊಂಡಿದ್ದು, ಅಂತಹ ಭೂಮಿಯನ್ನು ಬಗರ್ ಹುಕುಂ ಕಾನೂನಿನ ಅಡಿಯಲ್ಲಿ ಅಲ್ಲಿ ಕೃಷಿ ಮಾಡಿಕೊಂಡಿದ್ದವರಿಗೆ ಸರಕಾರ ಹಂಚಬೇಕೆಂದು ಅವರು ಒತ್ತಾಯಿಸಿದರು.
ಮುಂದಿನ ಗೋಷ್ಠಿ – ‘ಕನ್ನಡದಲ್ಲಿ ತತ್ವಶಾಸ್ತ್ರ, ಇತಿಹಾಸ ಮತ್ತು ಅರ್ಥಶಾಸ್ತ್ರದ ಬರಹಗಳು’
ಮೊದಲಿಗೆ ಡಾ| ಟಿ ಎಸ್ ವೇಣುಗೋಪಾಲರು ತತ್ವಶಾಸ್ತ್ರದ ಬಗ್ಗೆ ಮಾತನಾಡಿ, ಭಾರತೀಯ ತತ್ವಶಾಸ್ತ್ರ ಸಾಹಿತ್ಯಗಳನ್ನು ಜನರ ಮುಂದಿಡುವ ಪ್ರಯತ್ನ ನಡೆಸಿದ್ದ ಶ್ರೀ ದೇವಿಪ್ರಸಾದ ಚಟ್ಟೋಪಾಧ್ಯಾಯರನ್ನು ಸ್ಮರಿಸಿದರು. ಅವರು ಭಾರತೀಯ ತತ್ವಶಾಸ್ತ್ರದ ಬಗ್ಗೆ ಬರೆದÀ ಪುಸ್ತಕ ಬಹಳಷ್ಟು ಜನಪ್ರಿಯವಾಗಿದ್ದು ಅನೇಕ ಬಾಷೆಗಳಿಗೆ ಅನುವಾದಗೊಂದಿವೆ. ಬಿ ವಿ ಕಕ್ಕಿಲ್ಲಾಯರು ಅದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದಲ್ಲಿ ತತ್ವಶಾಸ್ತ್ರದ ಸ್ವಂತ ಬರಹಗಳು ಬಹಳ ಅಪರೂಪ ಎಂದು ಅವರು ಹೇಳಿದರು.
ಡಾ| ವಿಜಯ ತಂಬಂಡರವರು ಕನ್ನಡದಲ್ಲಿ ಇತಿಹಾಸ ಸಾಹಿತ್ಯಗಳ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಹಾಗೂ ಕಾ| ಕಳಲೆ ಪಾರ್ಥಸಾರಥಿಯವರು ಕನ್ನಡ ಸಾಹಿತ್ಯದಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯಶಾಸ್ತ್ರಗಳ ಬೆಳವಣಿಗೆ ಬಗ್ಗೆ ಮಾತನಾಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ| ಜಿ ರಾಮಕೃಷ್ಣರವರು ಎಡಪಂಥೀಯ ಸಾಹಿತ್ಯಗಳನ್ನು ಕನ್ನಡಕ್ಕೆ ಅನುವಾದಿಸುವಾಗ ಆಗುವ ಎಡರು ತೊಡರುಗಳ ಬಗ್ಗೆ ಮಾತನಾಡಿದರು. ವಿದೇಶಿ ಭಾಷೆಗಳ ಶಬ್ದಗಳಿಗೆ ಕನ್ನಡ ಪಾರಿಭಾಷಿಕ ಶಬ್ದಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.
ಮುಂದಿನ ಹಾಗೂ ಕೊನೆಯ ಗೋಷ್ಠಿ – ‘ಜಾತಿ, ಲಿಂಗಗಳನ್ನು ಮೀರಿ ಕಲೆಯ ಮರು ನಿರೂಪಣೆ’ ಎಂಬುದಾಗಿತ್ತು.
ಕರ್ನಾಟಕ ಸಂಗೀತದ ಶ್ರೇಷ್ಠ ಸಾಧಕ, ಪರಿಸರವಾದಿ ಹಾಗೂ ಬರಹಗಾರ ಶ್ರೀ ಟಿ ಎಮ್ ಕೃಷ್ಣ ಅವರು ಮಾತನಾಡಿ ‘ಸೌಂದರ್ಯೋಪಾಸನೆ ಅಥವಾ ಸೊಗಸಿನ ಗ್ರಹಿಕೆಯು ಎಲ್ಲಾ ರೀತಿಯ ತಾರತಮ್ಯಯಗಳಿಗೆ ಕಾರಣವಾಗಿದೆ. ಒಬ್ಬನ ಗ್ರಹಿಕೆಯ ಮಟ್ಟವು ಆತನ ಜೀವನ ಕ್ರಮ, ಕಸುಬು, ಜಾತಿ, ಹಿನ್ನೆಲೆ, ಆಹಾರ ಕ್ರಮ ಮುಂತಾದುವುಗಳಿಂದ ಪ್ರೇರಿತವಾಗುತ್ತದೆ. ಈ ರೀತಿಯ ತಾರತಮ್ಯ ಜೀವನದ ಪ್ರತಿಯೊಂದು ಘಟ್ಟದಲ್ಲೂ ಕಂಡುಬರುತ್ತದೆ. ಪಾಶ್ಚಿಮಾತ್ಯ ಸಂಗೀತ ಬಿಳಿ ಸಂಗೀತವಾಗಿದ್ದು ಭಾರತೀಯ ಶಾಸ್ತ್ರೀಯ ಸಂಗೀತ ಬ್ರಾಹ್ಮಣಮಯವಾಗಿದೆ. ತಾರತಮ್ಯಗಳು ಕೆಲವೊಮ್ಮೆ ನಮ್ಮೊಳಗೂ ಕಂಡುಬರುತ್ತದೆ. ಕಲೋಪಾಸಕರು ಮತ್ತು ಕಲಾರಾಧಕರು ಈ ತಾರತಮ್ಯಗಳನ್ನು ತೊಡೆದುಹಾಕಲು ಮಾಡುವ ಪ್ರಯತ್ನಗಳನ್ನು ಬೆಂಬಲಿಸಬೇಕು’ ಎಂದು ಕರೆಯಿತ್ತರು.
ನಂತರ ಮಾತನಾಡಿದ ಕಾ| ನೂರ್ ಝಹೀರ್ ಕಲೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಿದರು. ಕಲಾವಿಭಾಗದಲ್ಲಿ ಮಹಿಳೆಯರ ಕೊಡುಗೆ ಅಪಾರವಿದ್ದರೂ ಮಹಿಳೆಯರ ಕಡೆಗಣನೆ ಹಿಂದಿನಿಂದಲೂ ನಡೆದು ಬಂದಿದ್ದು ಅದು ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿಪಿಐ ಕರ್ನಾಟಕ ರಾಜ್ಯ ಸಮಿತಿಯ ಜೊತೆ ಕಾರ್ಯದರ್ಶಿ ಕಾ| ಜನಾರ್ಧನ ವಹಿಸಿದ್ದರು. ಕಕ್ಕಿಲ್ಲಾಯರ ಸಹವರ್ತಿ ಕಾ| ಬಿ ಕೆ ಕೃಷ್ಣಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾ| ವಿ ಕುಕ್ಯಾನ್, ಎಮ್ ಎಸ್ ಕೃಷ್ಣನ್ ಟ್ರಸ್ಟ್ ನ ಕಾ| ಬಾಬು ಜಿ ಹಾಗೂ ಕಾಂಗ್ರೆಸ್ ಮುಂದಾಳು ಪಿ ವಿ ಮೋಹನ್ ಕಕ್ಕಿಲ್ಲಾಯರ ಒಡನಾಟಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಕೊನೆಗೆ ಶ್ರೀ ಟಿ ಎಮ್ ಕೃಷ್ಣ ಅವರ ಸಂಗೀತ ಕಛೇರಿಯು ಮಂತ್ರಮುಗ್ಧಗೊಳಿಸಿತು. ಅವರಿಗೆ ವಿಧುಷಿ ಅಕ್ಕರೈ ಶುಭಲಕ್ಷ್ಮಿ ವಾಯಿಲಿನ್ನಲ್ಲಿ ಹಾಗೂ ವಿದ್ವಾನ್ ಜಯಚಂದ್ರ ರಾವ್ ಕೆ ಯು ಮೃದಂಗದಲ್ಲಿ ಸಹಕರಿಸಿದರು.
ಶ್ರೀ ಟಿ ಎಮ್ ಕೃಷ್ಣ ಅವರ ಸಂಗೀತ ಕಛೇರಿ ನಡೆಸಿಕೊಟ್ಟರು. ಅವರಿಗೆ ವಿಧುಷಿ ಅಕ್ಕರೈ ಶುಭಲಕ್ಷ್ಮಿ ವಾಯಿಲಿನ್ನಲ್ಲಿ ಹಾಗೂ ವಿದ್ವಾನ್ ಜಯಚಂದ್ರ ರಾವ್ ಕೆ ಯು ಮೃದಂಗದಲ್ಲಿ ಸಹಕರಿಸಿದರು.ಈ ಅದ್ಭುತ ಸಂಗೀತ ಕಛೇರಿಯು ಬಿವಿ ಕಕ್ಕಿಲ್ಲಾಯರ ಚೇತನಕ್ಕೆ ಸಲ್ಲಿಸಬಹುದಾದ ಪರಿಪೂರ್ಣವಾದ ಗೌರವವಾಗಿತ್ತೆನ್ನಬಹುದು. ಅವರು ಹಾಡಿದ ಎಲ್ಲ ಹಾಡುಗಳೂ ಶ್ರೀ ಕಕ್ಕಿಲ್ಲಾಯರು ಮತ್ತು ಸ್ವತಃ ಶ್ರೀ ಟಿ ಎಂ ಕೃಷ್ಣ ನಂಬಿ ಪ್ರತಿಪಾದಿಸುವ ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ಪ್ರೀತಿ, ಸಹನೆ, ಶಾಂತಿ, ಬಹುತ್ವ ಇವುಗಳನ್ನು ಕುರಿತೇ ಆಗಿದ್ದುವು. ಮೊತ್ತ ಮೊದಲು ಹಾಡಿದ ಸಂಸ್ಕೃತ ಶ್ಲೋಕವು ಏಸುಕ್ರಿಸ್ತನನ್ನು ಕುರಿತದ್ದಾಗಿತ್ತು. ಅದು ಹಲವು ದಶಕಗಳ ಹಿಂದೆ ಶ್ರದ್ಧಾವಂತ ಹಿಂದುವೊಬ್ಬರು ಕ್ರಿಸ್ತನನ್ನು ಕುರಿತು ರಚಿಸಿದ್ದಾಗಿತ್ತು. ಈಗ ಅಮೆರಿಕೆಯಲ್ಲಿ ವಾಸಿಸುತ್ತಿರುವ ಅವರ ಮಗ ಅದನ್ನು ಕೃಷ್ಣ ಅವರಿಗೆ ಕಳಿಸಿಕೊಟ್ಟಿದ್ದರು. ಅದನ್ನು ಉಗಾಭೋಗದಂತೆ ಹಾಡಿದ ಬೆನ್ನಿಗೇ, ಶಂಕರಾಭರಣದಲ್ಲಿ ದೀಕ್ಷಿತರ ಶ್ರೀ ದಕ್ಷಿಣಾಮೂರ್ತಿ ಕೃತಿಯನ್ನು ಕೃಷ್ಣ ಹಾಡಿದರು. ಹಾಡಿನ ನಡುವೆಯೇ ಅವರು ದೀಕ್ಷಿತರು ಶಿವನಿಗೆ ಬಳಸಿದ ವಿಶೇಷಣಗಳು ಮತ್ತು ಶ್ಲೋಕದಲ್ಲಿ ಕ್ರಿಸ್ತನಿಗೆ ಬಳಸಲಾಗಿದ್ದ ವಿಶೇಷಣಗಳು – ರೋಗನಿವಾರಕ, ಪಾಪನಾಶಕ, ಲೋಕಹಿತಕಾರಿ, ಶಾಂತಮೂರ್ತಿ – ಒಂದೇ ಬಗೆಯವು, ಪರಮಾತ್ಮನನ್ನು ಕುರಿತ ಕಲ್ಪನೆ ಮತ್ತು ನಿರೀಕ್ಷೆ ಎಲ್ಲೆಡೆಯಲ್ಲೂ ಒಂದೇ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು. ಅನಂತರ ಶುದ್ಧ-ಅಶುದ್ಧ, ಮೇಲು-ಕೀಳು ಎಂಬ ಮಾನವನಿರ್ಮಿತ ಕಲ್ಪನೆಗಳನ್ನು ಕೆಸರಿನಲ್ಲಿ ಹುಟ್ಟಿದ ಕಮಲವು ನಾರಾಯಣನಿಗೆ ಸಮರ್ಪಿತವಾಗುವ ವಿರೋಧಾಭಾಸದ ಮೂಲಕ ಪ್ರಶ್ನಿಸುವ ಕನಕದಾಸರ ‘ಕುಲಕುಲವೆನ್ನುತಿಹರು’ ಎಂಬ ಪದವನ್ನು ಹಾಡಿದರು. ಅದಾದ ನಂತರ ತಮಿಳುನಾಡಿನ ನಾಗೂರು ದರ್ಗಾದಲ್ಲಿ ಹಾಡುವ ಪ್ರೀತಿ, ಭ್ರಾತೃತ್ವವನ್ನು ಪ್ರತಿಪಾದಿಸುವ ಅಲ್ಲಾವೈ ಎಂಬ ತಮಿಳು ಸೂಫಿ ಗೀತೆಯನ್ನು ಬೇಹಾಗ್ ರಾಗದಲ್ಲಿ ಹಾಡಿದರು. ಆ ಬಳಿಕ, ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ಬಸವಣ್ಣನವರ ಅತ್ಯಂತ ಪ್ರಸಿದ್ಧ ವಚನವನ್ನು ಹಾಡಿ, ದೇಹ ದೇಗುಲವಾಗದೆ, ಆಲಯವು ದೇಗುಲವಾದರೆ ಶಿವ ಲಯವಾಗುತ್ತಾನೆ (ನಾಶವಾಗುತ್ತಾನೆ), ಶಿವ ಸ್ಥಾವರನಲ್ಲ ಜಂಗಮ ಎಂಬ ಬಸವಣ್ಣನವರ ಸಂದೇಶವನ್ನು ವ್ಯಕ್ತಪಡಿಸಿದರು. ಅದಾದ ನಂತರ, ತಾನು ನೆಚ್ಚಿದ ಮೌಲ್ಯಕ್ಕಾಗಿ, ತಾನು ಪ್ರೀತಿಸುವ ಕೃಷ್ಣನಿಗಾಗಿ, ಮೀರಾಬಾಯಿ ರಾಜಕೀಯ ಒತ್ತಡವನ್ನು ಮತ್ತು ಸಾಮಾಜಿಕ ನಿಂದನೆಯನ್ನು ದಿಟ್ಟತನದಿಂದ ಎದುರಿಸುವುದನ್ನು ವಿವರಿಸುವ ‘ಪದ ಘುಂಘುರು ನಾಚೆ’ ಭಜನೆಯನ್ನು ಹಾಡಿದರು. ತಮ್ಮ ಬದುಕನ್ನು ಪುಟಕ್ಕಿಟ್ಟ ಚಿನ್ನದಂತೆ ಶುದ್ಧಗೊಳಿಸಿ, ತಮ್ಮ ಕಣ್ಣುಗಳಿಗೆ ಕವಿದಿರುವ ತಮಸ್ಸನ್ನು ತೊಡೆದು, ಬೆಳಕನ್ನು ಕಾಣುವಂತೆ ಮಾಡು ಎಂದು ರವೀಂದ್ರನಾಥ ಟ್ಯಾಗೋರರು ಪ್ರಾರ್ಥಿಸುವ ‘ಆಗುನರ್ ಪರಶ್ಮೋನಿ ಛಾವೋ ಪ್ರಾಣೆ’ ಎಂಬ ಮನೋಜ್ಞವಾದ ಗೀತೆಯೊಂದಿಗೆ ತಮ್ಮ ಕಚೇರಿಯನ್ನು ಸಂಪನ್ನಗೊಳಿಸಿದರು.
ದಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಸರಳವಾಗಿ ಎರಡು ದಿನಗಳ ಕಾರ್ಯಕ್ರಮಗಳನ್ನು ನಿರೂಪಿಸಿದರು. ಸತತವಾಗಿ ಸುರಿಯುತ್ತಿದ್ದ ಭಾರೀ ಮಳೆಯನ್ನೂ ಲೆಕ್ಕಿಸದೆ ಎರಡೂ ದಿನಗಳಲ್ಲಿ ಸಭಾಂಗಣದ ತುಂಬ ಪ್ರತಿನಿಧಿಗಳು ತುಂಬಿದ್ದರು, ಎಲ್ಲ ಸಂವಾದಗಳಲ್ಲಿ ತನ್ಮಯರಾಗಿ ಪಾಲ್ಗೊಂಡಿದ್ದರು. ಎಬಿವಿಪಿ, ಬಜರಂಗ ದಳ, ಶ್ರೀ ರಾಮ ಸೇಣೆ, ಹಿಂದು ಜಾಗರಣ ವೇದಿಕೆ ಮುಂತಾದ ಮೂಲಭೂತವಾದಿ ಸಂಘಟನೆಗಳು ಒಡ್ಡಿದ್ದ ಬೆದರಿಕೆಗಳನ್ನು ಲೆಕ್ಕಿಸದೆ, ಮಂಗಳೋಒರು ನಗರ ಪೋಲೀಸರ ಸಂಪೂರ್ಣ ಶಕಾರ ಹಾಗೂ ರಕ್ಷಣೆಯೊಂದಿಗೆ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಾಧ್ಯಮಗಳಲ್ಲಿ ವ್ಯಾಪಕ ವರದಿಗಳಾದದ್ದಲ್ಲದೆ, ಸ್ಥಳೀಯ ಕೇಬಲ್ ಜಾಲದಲ್ಲೂ ನೇರ ಪ್ರಸಾರವಾಯಿತು.
ಮಂಗಳೂರಿನ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಂಗಳೂರಿನ ಸಮದರ್ಶಿ ವೇದಿಕೆ, ಹಾಗೂ ಬೆಂಗಳೂರಿನ ಹೊಸತು ಪತ್ರಿಕೆ, ಎಂ ಎಸ್ ಕೃಷ್ಣನ್ ಸ್ಮರಣ ಸಂಸ್ಥೆ ಮತ್ತು ನವಕರ್ನಾಟಕ ಪ್ರಕಾಶನ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದವು. ಬಿವಿ ಕಕ್ಕಿಲ್ಲಾಯರ ಶತಾಬ್ದಿ ಕಾರ್ಯಕ್ರಮವು ಕಾರ್ಲ್ ಮಾರ್ಕ್ಸ್ 200, ಮಹಾತ್ಮಾ ಗಾಂಧಿ 150, ಎಐಟಿಯುಸಿ 100, ಸಿಪಿಐ 95, ಭಾರತೀಯ ಜನಕಲಾ ಸಮಿತಿ 75 ಮತ್ತು ನವಕರ್ನಾಟಕ ಪ್ರಕಾಶನದ 60ನೇ ವರ್ಧಂತಿಗಳಿಗೂ ಸಾಕ್ಷಿಯಾಯಿತು.
ಚಿತ್ರಗಳು: ಯಜ್ಞ, ಮಂಗಳೂರು
ವಿಡಿಯೋ: ಶೆಣೈ ವಿದಿಯೋ, ಮಂಗಳೂರು
ಮಾಧ್ಯಮ ವರದಿಗಳು
More links:
- Government neglecting interests of working class : Amarjeet Kaur: http://www.mangaloretoday.com/main/Government-neglecting-interests-of-working-class-Amarjeet-Kaur.html
- Attempts made to stall movement: Kanhaiya Kumar – https://www.deccanherald.com/state/mangaluru/attempts-made-to-stall-movement-kanhaiya-kumar-753565.html
- Stop patronising Modi, start questioning him: Kanhaiya – https://www.thehindu.com/news/cities/Mangalore/stop-patronising-modi-start-questioning-him-kanhaiya/article28979239.ece
- “The spirit of democracy is to question authority”: Kanhaiya Kumar at B V Kakkilaya Centenary – https://themanipaljournal.com/2019/08/12/the-spirit-of-democracy-is-to-question-authority-khanhaiya-kumar-at-b-v-kakkilaya-centenary/
- Mangaluru: Youth today are victims of propaganda – Dr Kanhaiya Kumar: https://www.daijiworld.com/news/newsDisplay.aspx?newsID=613697
- ‘Growth of India’s Youth has Gone Backward than Forward’ – AISF Leader Dr Kanhaiya Kumar – https://www.mangalorean.com/growth-of-indias-youth-has-gone-backward-than-forward-aisf-leader-dr-kanhaiya-kumar/
- Photo album: https://www.facebook.com/pg/MangaloreanNews/photos/?tab=album&album_id=2203823869721833
- ಸರಕಾರದ ಅಂಧಭಕ್ತಿಯೇ ದೇಶದ್ರೋಹ – https://www.prajavani.net/stories/national/kanhaiya-kumar-jnu-student-657247.html
- ರಾಮ ನಮ್ಮೂರಿನ ಅಳಿಯ, ಸೀತೆಯ ಊರು ನನ್ನದು: ಡಾ. ಕನ್ಹಯ್ಯ ಕುಮಾರ್ – https://www.prajavani.net/artculture/article-features/i-belongs-seetha-town-657299.html
- ಅಂಧಭಕ್ತಿ ಪ್ರದರ್ಶನವೂ ದೇಶದ್ರೋಹ: ಕನ್ಹಯ್ಯ ಕುಮಾರ್ – https://vijaykarnataka.indiatimes.com/state/karnataka/showing-devotion-to-one-government-which-is-also-anti-national-says-cpi-leader-kanhaiya-kumar/articleshow/70625822.cms
- ಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ: ಮಂಗಳೂರಿನಲ್ಲಿ ಕನ್ಹಯ್ಯ ಕುಮಾರ್ ಭಾಷಣ – https://www.naanugauri.com/dr-kannhiah-kumar-speech-in-mangalore-today-%E0%B2%85%E0%B2%B0%E0%B3%8D%E0%B2%A5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%AE%E0%B3%87%E0%B2%B2%E0%B3%86-%E0%B2%A7/
- https://www.newskarnataka.com/mangalore/kanhaiya-kumar-honours-dk-freedom-fighter-kakkilaya-on-birth-centenary
- ‘Fate of farmers has not improved much’: https://www.deccanherald.com/state/mangaluru/fate-of-farmers-has-not-improved-much-753945.html
- https://www.thehindu.com/news/national/karnataka/we-need-to-be-upset-with-homogenised-reaction-from-kashmir-tm-krishna/article29037103.ece (Sri TM Krishna has sugegsted a correction, that his statement should read as – we need to be upset about the homogenous response to what is happening in Kashmir from Indians in rest of the country)